ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಮತ್ತು ಸಂಭ್ರಮದಿಂದ ಚಾಲನೆಗೊಂಡಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು, ಸತತ ಎರಡನೇ ಬಾರಿಗೆ ಈ ಸಂಸ್ಥೆಯ ಗಣೇಶೋತ್ಸವವನ್ನು ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ತಮ್ಮ ಸುದೈವ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ದಂಪತಿಯನ್ನು ಹಾಗೂ ಬಾಲ ಸಂಗೀತ ಪ್ರತಿಭೆ ಅಜಿಂತ್ಯ ರೈ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಪ್ರಧಾನ ಮಂತ್ರಿಗಳ ‘ಸ್ವಚ್ಛ ಭಾರತ’ ಆಶಯಕ್ಕೆ ಬೆಂಬಲವಾಗಿ ಪ್ರತಿಯೊಂದು ಗಣೇಶೋತ್ಸವವೂ ಪರಿಸರಸ್ನೇಹಿಯಾಗಿ ಆಚರಣೆಯಾಗಲಿ ಎಂದು ಕರೆ ನೀಡಿದರು. ಧ್ವಜಾವರೋಹಣ ನೆರವೇರಿಸಿದ ಗ್ರೂಪ್ ಕ್ಯಾಪ್ಟನ್ ಎಸ್.ಎಂ. ಅಡ್ಯಂತಾಯ ಅವರು, ಬಂಟ್ ಸಮುದಾಯವು ಸಮೃದ್ಧ ಪರಂಪರೆ ಹೊಂದಿದ್ದು ಶಿಕ್ಷಣ, ಆಡಳಿತ, ವೈದ್ಯಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಿದೆ ಎಂದರು. ಮಾತೃ ಸಂಘದ ಮಾಜಿ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ ಹಾಗೂ ನಳಿನಿ ಆರ್. ಹೆಗ್ಡೆ ತೆನೆ ವಿತರಣೆ ನೆರವೇರಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಗೀತಾ ಅಡ್ಯಂತಾಯ, ಮಾಳವಿಕಾ ಜಯಾನಂದ್, ದಂಬೆಕಾನ ಸದಾಶಿವ ರೈ, ಪದ್ಮನಾಭ ರೈ, ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘದ ಅಧ್ಯಕ್ಷ ಜೆ. ಸತ್ಯಪ್ರಸಾದ್ ಶೆಟ್ಟಿ, ಶೇಖರ ಶೆಟ್ಟಿ, ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.