image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿ. ರಮಾನಾಥ ರೈ 75ರ ಸಂಭ್ರಮ: ಲಾಂಛನ ಬಿಡುಗಡೆ

ಬಿ. ರಮಾನಾಥ ರೈ 75ರ ಸಂಭ್ರಮ: ಲಾಂಛನ ಬಿಡುಗಡೆ

ಬಂಟ್ವಾಳ: ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಆಚರಣಾ ಸಮಿತಿ ವತಿಯಿಂದ ಮಾಜಿ ಸಚಿವ ಬಿ. ರಮಾನಾಥ ರೈ ಅವರ 75ರ ಸಂಭ್ರಮ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮವು ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ರಮಾನಾಥ ರೈ ಅವರು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಸರ್ವರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಂದ ಮಹಾನ್ ವ್ಯಕ್ತಿ ಎಂದರು. ಅಧಿಕಾರ ಇದ್ದರೂ ಇಲ್ಲದಿದ್ದರೂ ಸದಾ ಜನಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅಪರೂಪದ ರಾಜಕಾರಣಿಯಾಗಿರುವ ಇಂತಹವರ ಸೇವೆ ಇನ್ನೂ ಹಲವಾರು ವರ್ಷ ಜನರಿಗೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. ಈ ವರ್ಷ ಸಮಿತಿಯ ವತಿಯಿಂದ ರಮಾನಾಥ ರೈ ಅವರ 75ನೇ ಹುಟ್ಟುಹಬ್ಬವನ್ನು ವಿಶಿಷ್ಟ ಹಾಗೂ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಲಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ತುಕಾರಾಮು ಪೂಜಾರಿ ಮಾತನಾಡಿ, ವಿದ್ಯಾರ್ಥಿ ದಸೆಯಲ್ಲೇ ವಿಶಿಷ್ಟವಾದ ವ್ಯಕ್ತಿತ್ವ ರೂಪಿಸಿಕೊಂಡ ರಮಾನಾಥ ರೈ ಅವರು ಕರಾವಳಿಯ ರಾಜಕೀಯ ಭೀಷ್ಮ ಎಂದು ಬಣ್ಣಿಸಿದರು. ಇದೇ ವೇಳೆ ರಮಾನಾಥ ರೈ ಅವರ ಹುಟ್ಟುಹಬ್ಬವನ್ನು ಆಚರಿಸಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಅವರ 75ರ ಸಂಭ್ರಮದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮಮತಾ ಡಿ.ಎಸ್. ಗಟ್ಟಿ, ಶ್ಯಾಲೆಟ್ ಪಿಂಟೋ, ಲಾವಣ್ಯ ಬಳ್ಳಾಲ್, ಎಂ.ಎಸ್. ಮಹಮ್ಮದ್, ಅಶ್ವಿನ್ ಕುಮಾರ್ ರೈ, ಮಲ್ಲಿಕಾ ಶೆಟ್ಟಿ, ಪದ್ಮಶೇಖರ ಜೈನ್, ಮುಸ್ತಫಾ ಸುಳ್ಯ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಸುದೀಪ್ ಕುಮಾರ್ ಶೆಟ್ಟಿ, ಬಿ.ಎಂ. ಅಬ್ಬಾಸ್ ಅಲಿ, ಕೆ.ಕೆ. ಸಾಹುಲ್ ಹಮೀದ್, ಇಬ್ರಾಹಿಂ ನವಾರೂ ಬಡಕಬೈಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಯೂಷ್ ಎಲ್. ರೋಡ್ರಿಗಸ್ ಸ್ವಾಗತಿಸಿ, ಬೇಬಿ ಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ