ಮಂಗಳೂರು: ನಗರದ ಓಲ್ಡ್ ಪೋರ್ಟ್ ರಸ್ತೆಯ ರೆಡ್‌ಕ್ರಾಸ್ ಸೆಂಟಿನರಿ ಬಿಲ್ಡಿಂಗ್‌ನ ಪ್ರೇರಣಾ ಅಡಿಟೋರಿಯಂನಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ ಕಳೆದ ಹತ್ತು ವರ್ಷಗಳ ಸಮಾಜ ಸೇವಾ ಚಟುವಟಿಕೆಗಳ ಸ್ಮರಣಾರ್ಥ ಹಾಗೂ “ಅವೇಕ್ ಕುಡ್ಲ” ಅಭಿಯಾನದ ಮುಂದಿನ ರೂಪುರೇಷೆಗಳನ್ನು ರೂಪಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ನಡೆಯಿತು.
ಕಾರ್ಯಕ್ರಮದ ಮೊದಲ ಭಾಗವಾಗಿ “ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿನ ಸವಾಲುಗಳು – ಪರಿಹಾರ ಕಂಡುಕೊಳ್ಳುವಲ್ಲಿ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಪಾತ್ರ” ವಿಷಯದ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಸಂವಾದಕ್ಕೂ ಮುನ್ನ “ಅವೇಕ್ ಕುಡ್ಲ” ಪರಿಕಲ್ಪನೆಯ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ (IAS) ಹಾಗೂ ಮಂಗಳೂರು ನಗರ ಪೊಲೀಸ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ. ರವಿಶಂಕರ್ (KSPS) ಸಂವಾದಕರಾಗಿ ಭಾಗವಹಿಸಿ, ಸಮಸ್ಯೆಗಳು ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯತೆ ಕುರಿತು ಚರ್ಚಿಸಿದರು. ರೇಡಿಯೋ ಸಾರಂಗ್‌ನ ಮುಖ್ಯ ಕಾರ್ಯನಿರ್ವಾಹಕ ಅಭಿಷೇಕ್ ಶೆಟ್ಟಿ ಸಂವಾದ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಅವರು, ಸಮಾಜದ ಅಭಿವೃದ್ಧಿಯಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದ್ದು, ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರೂ ಜವಾಬ್ದಾರಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ಹತ್ತು ವರ್ಷಗಳ ಸೇವಾ ಪಯಣವನ್ನು ದಾಖಲಿಸಿದ ವಿಶೇಷ ಆಲ್ಬಮ್ ಬಿಡುಗಡೆ ಮಾಡಲಾಯಿತು ಹಾಗೂ ಸಹಕರಿಸಿದ ಪ್ರಮುಖರು ಮತ್ತು ಸಂಸ್ಥೆಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ಅ. ಸೀತಾರಾಮ್ ಅವರು ಮಾತನಾಡಿ, “ನಮ್ಮ ಊರು – ನಮ್ಮ ಹೆಮ್ಮೆ, ನಮ್ಮ ಪರಿಸರ – ನಮ್ಮ ಜವಾಬ್ದಾರಿ” ಎಂಬ ಆಶಯದೊಂದಿಗೆ ಟ್ರಸ್ಟ್ ತನ್ನ ಸೇವಾ ಕಾರ್ಯಗಳನ್ನು ಮುಂದುವರಿಸಲಿದ್ದು, 'ಅವೇಕ್ ಕುಡ್ಲ' ಅಭಿಯಾನವನ್ನು ಮಂಗಳೂರು ನಗರದಾದ್ಯಂತ ವಿಸ್ತರಿಸಲಾಗುವುದು ಎಂದರು.
ಸಭೆಯಲ್ಲಿ ಸಿಎ ನಿತಿನ್ ಜೆ. ಶೆಟ್ಟಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಖ್ಯಾತ ಮನೋವೈದ್ಯ ಡಾ. ಸತೀಶ್ ರಾವ್ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್‌ನ ಚಿತ್ತರಂಜನ್ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್ ಸ್ವಾಗತಿಸಿ ಪ್ರಸ್ತಾವನೆ ನೀಡಿದರೆ, ಉಪಾಧ್ಯಕ್ಷ ಡಾ. ಪ್ರವೀಣ್ ಕೆ. ಧನ್ಯವಾದ ಸಮರ್ಪಿಸಿದರು.