image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಘನಿಕೇತನದಲ್ಲಿ 79ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ – ಭವ್ಯ ಮೃತಿಕಾ ವಿಗ್ರಹ ಮೆರವಣಿಗೆ

ಸಂಘನಿಕೇತನದಲ್ಲಿ 79ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ – ಭವ್ಯ ಮೃತಿಕಾ ವಿಗ್ರಹ ಮೆರವಣಿಗೆ

ಮಂಗಳೂರು: ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ದೇವರ ಮೃತಿಕಾ ವಿಗ್ರಹ ಮೆರವಣಿಗೆಯು ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ದಿವಂಗತ ಮೋಹನ್ ರಾವ್ ಅವರ ಮನೆಯಲ್ಲಿ ಗಣೇಶನ ಮೂರ್ತಿಯನ್ನು ರಚಿಸಲಾಗಿದ್ದು, ಅಲ್ಲಿಂದ ಸಂಘನಿಕೇತನದವರೆಗೆ ಮೆರವಣಿಗೆಯ ಮೂಲಕ ತರಲಾಯಿತು. ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿಯ ಸ್ವಯಂಸೇವಕರು ಭುಜ ಸೇವೆಯ ಮೂಲಕ ಮೃತಿಕಾ ಮೂರ್ತಿಯನ್ನು ಮೆರವಣಿಗೆಯಲ್ಲಿ ಹೊತ್ತು ತಂದರು. ಮುಂಬರುವ ಐದು ದಿನಗಳ ಕಾಲ ಶ್ರೀ ಗಣೇಶೋತ್ಸವವು ಅತ್ಯಂತ ವೈಭವದಿಂದ ಜರುಗಲಿದ್ದು, ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಮಾನ್ಯ ಸಂಘಚಾಲಕರಾದ ಡಾ. ಸತೀಶ್ ರಾವ್ ಹಾಗೂ ವಿಭಾಗ ಪ್ರಚಾರಕರಾದ ಶ್ರೀ ಸುರೇಶ್ ಜಿ ಅವರು ಉಪಸ್ಥಿತರಿದ್ದು ಅಗತ್ಯ ಮಾರ್ಗದರ್ಶನ ನೀಡಿದರು. ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್‌ನ ಉಪಾಧ್ಯಕ್ಷರಾದ ಶ್ರೀ ಕೆ. ರಘುವೀರ್ ಕಾಮತ್, ಕಾರ್ಯದರ್ಶಿ ಗಜಾನನ ಪೈ ಹಾಗೂ ಸೇವಾ ಭಾರತಿಯ ಪ್ರಮುಖರಾದ ವಿನೋದ್ ಶೆಣೈ ಭಾಗವಹಿಸಿದ್ದರು.

ಅಲ್ಲದೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಆನಂದ ಪಾಂಗಳ, ಶ್ರೀ ಕೆ. ಪದ್ಮನಾಭ, ಸ್ಮಿತಾ ಎಂ, ಪ್ರಧಾನ ಕಾರ್ಯದರ್ಶಿ ಶ್ರೀ ಜಿ. ಸುರೇಶ್ ವಿ. ಕಾಮತ್, ಕೋಶಾಧಿಕಾರಿ ಶ್ರೀ ರಂಗನಾಥ್ ಸೇರಿದಂತೆ ಜೊತೆ ಕಾರ್ಯದರ್ಶಿಗಳಾದ ನಂದನ್ ಮಲ್ಯ, ಜೀವನರಾಜ್ ಶೆಣೈ, ಗಣೇಶ್ ಪ್ರಸಾದ್ ಹಾಗೂ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ