ಮಂಗಳೂರು: ನಗರದಲ್ಲಿನ ನಾಗರಿಕ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಂಡು ಪರಿಹರಿಸುವ ಸಲುವಾಗಿ ಮುಂದಿನ ತಿಂಗಳಿನಿಂದ 'ವಾಕ್ ವಿತ್ ಕಮಿಷನರ್' ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನ ಪಾಂಡೆ ತಿಳಿಸಿದ್ದಾರೆ. ಜಪ್ಪು ಅಂಬಾನಗರದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಗರದ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಲಾಗಿದ್ದ 'ಅವೇಕ್ ಕುಡ್ಲ' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯ ಸವಾಲುಗಳು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪಾತ್ರದ ಕುರಿತು ಈ ಸಂವಾದ ನಡೆಯಿತು.
ಸಂವಾದದಲ್ಲಿ ಸಾರ್ವಜನಿಕರು ಫುಟ್‌ಪಾತ್ ಆಕ್ರಮಣ, ರಸ್ತೆ ವಿಸ್ತರಣೆಯಾದರೂ ಪಾದಚಾರಿಗಳಿಗೆ ನಡೆಯಲ್ಲಿ ಜಾಗವಿಲ್ಲದಿರುವುದು ಹಾಗೂ ಕಟ್ಟಡಗಳ ಮುಂದೆ ಅತಿಯಾದ ವಾಹನ ಪಾರ್ಕಿಂಗ್ ಕುರಿತು ದೂರುಗಳನ್ನು ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕ್ಯಾಬಿನೆಟ್ ಸಭೆ ಹಾಗೂ ಎಸ್‌ಬಿಆರ್ ಕಾರಣ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಲಸದ ಒತ್ತಡವಿದೆ. ಮುಂದಿನ ತಿಂಗಳಿನಿಂದ ಸ್ವತಃ ತಾವೇ ಫುಟ್‌ಪಾತ್‌ಗಳಿಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಹಾಗೂ ಶೇಕಡಾ 100 ರಷ್ಟು ಫುಟ್‌ಪಾತ್‌ಗಳು ಜನರಿಗೆ ತೆರೆದಿರುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
'ವಾಕ್ ವಿತ್ ಕಮಿಷನರ್' ಯೋಜನೆಯಡಿ ಹೆಚ್ಚು ಸಮಸ್ಯೆಗಳಿರುವ ವಾರ್ಡ್‌ಗಳನ್ನು ಗುರುತಿಸಿ, ಆಯುಕ್ತರು ಮುಂಚಿತವಾಗಿಯೇ ವೇಳಾಪಟ್ಟಿ ಪ್ರಕಟಿಸಲಿದ್ದಾರೆ. ನಿಗದಿತ ದಿನದಂದು ಆಯುಕ್ತರು ವಾರ್ಡ್‌ಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ನಡೆದುಕೊಂಡು ತೆರಳಲಿದ್ದು, ಸ್ಥಳೀಯರು ತಮ್ಮ ಸಮಸ್ಯೆಗಳನ್ನು ನೇರವಾಗಿ ವಿವರಿಸಬಹುದು. ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆಗೆ ಇತ್ಯರ್ಥದ ಕಾರ್ಯಯೋಜನೆ ರೂಪಿಸಲಾಗುವುದು.
ನಗರದಲ್ಲಿ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಪ್ರಸ್ತುತ ಶೇ.65 ರಷ್ಟು ಕಸ ವಿಲೇವಾರಿಯಾಗುತ್ತಿದೆ. ಪ್ರತಿದಿನ 300 ಟಿಡಿಪಿ ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದ್ದು, 10 ಟಿಪಿಡಿ ಸಾಮರ್ಥ್ಯದ ಸ್ಯಾನಿಟರಿ ಡಿಸ್ಪೋಸಲ್ ಘಟಕದ ಅಗತ್ಯವಿದೆ. ಪಚ್ಚನಾಡಿಯಲ್ಲಿ 2021ರಲ್ಲಿ 9 ಲಕ್ಷ ಟನ್ ತ್ಯಾಜ್ಯವಿತ್ತು, ಪ್ರಸ್ತುತ ಅದು 13 ಲಕ್ಷ ಟನ್ ಆಗಿರಬಹುದು. ಇದನ್ನು ಹಂತ-ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದರು. ಅಲ್ಲದೆ, ತ್ಯಾಜ್ಯವನ್ನು ರಸ್ತೆಯಲ್ಲೆಲ್ಲ ಎಸೆಯುವುದನ್ನು ತಡೆಯಲು ವಾರ್ಡ್‌ಗಳಲ್ಲಿ ಡಬ್ಬಿಗಳನ್ನು ಇಡಬೇಕು ಎಂದು ನಾಗರಿಕರು ಆಗ್ರಹಿಸಿದರು. ಅಂಗಡಿಯವರು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿದ್ದರೆ ದಂಡ ವಿಧಿಸಲಾಗುವುದು, ನಿಯಮ ಉಲ್ಲಂಘನೆ ಮರುಕಳಿಸಿದರೆ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಇನ್ನು ಸಂಚಾರ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ, ಪಾಂಡೇಶ್ವರದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರಸ್ತೆ ವಿಸ್ತರಣೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ. ಜೊತೆಗೆ ಫ್ಲೈ ಓವರ್ ನಿರ್ಮಾಣದ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಸೀತಾರಾಮ್, ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟೇಕಾರ್, ಸಂವಾದ ನಡೆಸಿಕೊಟ್ಟ ಅಭಿಷೇಕ್ ಶೆಟ್ಟಿ ಹಾಗೂ ಹನುಮಂತ ಕಾಮತ್, ಲತೀಫ್, ವಿಶ್ವನಾಥ ಕೋಟೇಕಾರ್, ಬೆನೆಡಿಕ್ಟ್ ಫೆರ್ನಾಂಡಿಸ್, ಸುನಂದಾ ಬಿಜ್ಜೆ, ಜಿ.ಕೆ. ಭಟ್, ಕೆ.ಜೆ. ಪಿಂಟೋ, ರಿಯಾ ಪಿಂಟೋ, ದೀಪಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.