image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನ ಜೀರ್ಣೋದ್ಧಾರ ಮನವಿ ಪತ್ರ ಬಿಡುಗಡೆ: ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ

ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನ ಜೀರ್ಣೋದ್ಧಾರ ಮನವಿ ಪತ್ರ ಬಿಡುಗಡೆ: ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ

​ಸುರತ್ಕಲ್: ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸುವುದು ಪ್ರತಿಯೊಬ್ಬ ಭಕ್ತನ ಧಾರ್ಮಿಕ ಕರ್ತವ್ಯವಾಗಿದೆ. ದೇವಸ್ಥಾನಗಳಿಗಿಂತ ದೈವಸ್ಥಾನಗಳ ವ್ಯಾಪ್ತಿ ದೊಡ್ಡದಾಗಿದ್ದು, ಸೀಮೆ ದೈವ ಜಾರಂದಾಯನ ಕಾರಣಿಕಕ್ಕೆ ಈ ಕ್ಷೇತ್ರದ ಸುದೀರ್ಘ ಇತಿಹಾಸವೇ ಸಾಕ್ಷಿಯಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು. ಸುರತ್ಕಲ್ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಪ್ರಸ್ತಾವಿತ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ನೂತನ ಧ್ವಜಸ್ತಂಭಕ್ಕೆ (ಕೊಡಿಮರ) ಎಳ್ಳೆಣ್ಣೆ ಸಮರ್ಪಣೆ, ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಜೀರ್ಣೋದ್ಧಾರ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

​ಕಾರ್ಯಕ್ರಮವನ್ನು ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಜೀರ್ಣೋದ್ಧಾರ ಕಾಮಗಾರಿಗಳಿಗೆ ಅಗತ್ಯವಿರುವ ಸಂಪೂರ್ಣ ಸಹಕಾರ ಹಾಗೂ ನೆರವು ನೀಡುವುದಾಗಿ ಭರವಸೆ ನೀಡಿದರು. ದೈವಸ್ಥಾನದ ಆಡಳಿತ ಸಮಿತಿ ಟ್ರಸ್ಟಿ ಡಾ. ಟಿ. ರಮಾನಾಥ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಮಿತಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ಕಾರ್ಯಾಧ್ಯಕ್ಷ ಕೆ.ಪಿ.ಕೆ. ಹೆಗ್ಡೆ, ಶಂಕರ ನಾರಾಯಣ ಭಟ್, ಜಾರಂದಾಯ ದೈವದ ಅರ್ಚಕ ಮೋಹನ್ ಪೂಜಾರಿ, ಕಾರ್ಯದರ್ಶಿ ಜಯ ಅಮೀನ್, ಕೋಶಾಧಿಕಾರಿ ಭೋಜ ದೇವಾಡಿಗ, ಆಡಳಿತ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಮನೆತನದ ಪ್ರಮುಖರು ಉಪಸ್ಥಿತರಿದ್ದರು. ಸ್ವರ್ಣಿಕಾ ಮತ್ತು ಆದ್ಯ ಪ್ರಾರ್ಥನೆ ನೆರವೇರಿಸಿದರು. ಸುಧಾಕರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

​ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹಿತ್ತಾಳೆ ಹೊದಿಕೆಯ ಧ್ವಜಸ್ತಂಭ ಸ್ಥಾಪನೆ, ಗರ್ಭಗುಡಿಗೆ ಮುಚ್ಚಿಗೆ ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಮುಂದಿನ ಮಾರ್ಚ್ 20 ರಿಂದ 24 ರವರೆಗೆ ಕ್ಷೇತ್ರದಲ್ಲಿ ವಿಜೃಂಭಣೆಯ ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ಬಂಡಿ ಉತ್ಸವ ನೆರವೇರಲಿದೆ.

Category
ಕರಾವಳಿ ತರಂಗಿಣಿ