ಮಂಗಳೂರು: ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್‌ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ - ಎಐ) ಕಾರ್ಯಾರಂಭ ಮಾಡಲಿದೆ. ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.
ನಗರದಲ್ಲಿ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದರು. ಮಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದು, ಇದು ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗಿದೆ ಎಂದು ನುಡಿದರು.
ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ, ನಿತ್ಯ ನೂತನವೂ ಹೌದು. ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟ ಅವರು, ಸಿಎಸ್‌ಆರ್ ನಿಧಿಗಳ ಸಮರ್ಪಕ ಬಳಕೆ ಕುರಿತು ಕಿವಿಮಾತು ಹೇಳಿದರು.
ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು ಎಂದು ಘೋಷಿಸಿದ ಸದ್ಗುರುಗಳು, ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು. ಅಲ್ಲದೆ, 'ಸಾಯಿಶ್ಯೂರ್' ಮೂಲಕ ದೇಶದ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಸಂಕಲ್ಪವಿರುವುದಾಗಿ ತಿಳಿಸಿದರು.
ಮೂಡುಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ.ಮೋಹನ್ ಆಳ್ವ ಅವರಿಗೆ "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್" ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಆಳ್ವ, ಮುಂಬರುವ ಜನವರಿಯಲ್ಲಿ ನಡೆಯಲಿರುವ ಆಳ್ವಾಸ್ ವಿರಾಸತ್ ಉದ್ಘಾಟನೆಗೆ ಸದ್ಗುರುಗಳನ್ನು ಆಹ್ವಾನಿಸಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್, ಎಂ.ಮೋಹನ್ ಆಳ್ವ, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.