image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಷ್ಯಾದ ಬ್ರಿಕ್ಸ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೂಡುಬಿದಿರೆಯ ವಿವೇಕ್ ಆಳ್ವ ಮುಖ್ಯ ಭಾಷಣ

ರಷ್ಯಾದ ಬ್ರಿಕ್ಸ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೂಡುಬಿದಿರೆಯ ವಿವೇಕ್ ಆಳ್ವ ಮುಖ್ಯ ಭಾಷಣ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸೇರಿದಂತೆ ಭಾರತದ ಐವರು ವಿಷಯ ತಜ್ಞರು ರಷ್ಯಾದ ಕರೇಲಿಯಾ ಗಣರಾಜ್ಯದ ಪೆಟ್ರೋಜಾವೊಡ್ಸ್ಕ್‌ನಲ್ಲಿ ಸೆಪ್ಟೆಂಬರ್ 15ರಿಂದ 17ರವರೆಗೆ ನಡೆಯಲಿರುವ ‘ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ ಸಹಕಾರದ ಮೂಲಕ ಪರಿಸರ ಮತ್ತು ಪ್ರಕೃತಿ ನಿರ್ವಹಣೆ’ ವಿಷಯದ ಮೂರನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ರಷ್ಯನ್ ವಿಜ್ಞಾನ ಅಕಾಡೆಮಿಯ ಕರೇಲಿಯನ್ ಸಂಶೋಧನಾ ಕೇಂದ್ರವು ರಷ್ಯನ್ ರಾಷ್ಟ್ರೀಯ ಬ್ರಿಕ್ಸ್ ಸಂಶೋಧನಾ ಸಮಿತಿಯ ಸಹಯೋಗದಲ್ಲಿ ಈ ಸಮ್ಮೇಳನವನ್ನು ಆಯೋಜಿಸಿದೆ.

ಈ ಸಮ್ಮೇಳನದಲ್ಲಿ ವಿವೇಕ್ ಆಳ್ವ ಅವರು ‘‘ಪಶ್ಚಿಮಘಟ್ಟಗಳ ಸಂರಕ್ಷಣೆ: ಜಾಗೃತಿಯಿಂದ ಸಮುದಾಯದ ಕಾರ್ಯದತ್ತ’’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಸಮುದಾಯಗಳು ಹಾಗೂ ಯುವಜನರ ಪಾತ್ರವನ್ನು ವಿವರಿಸಲಿರುವ ಅವರು, ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ತಮ್ಮ ಅಧಿವೇಶನದಲ್ಲಿ ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೈಗೊಂಡಿರುವ ಶೋಭಾವನ ಮತ್ತು 2021ರಲ್ಲಿ ‘ಯುನೈಟೆಡ್ ನೇಷನ್ಸ್ ಆ್ಯಕ್ಟ್ ಟೂ ರಿಸ್ಟೋರ್ ಫಾರ್ ಕ್ಲೈಮೇಟ್ ಆ್ಯಕ್ಷನ್’ ಉಪಕ್ರಮದಡಿ ಮನ್ನಣೆ ಪಡೆದಿರುವ ಹರೀಶ್ ಭಟ್ ಪಕ್ಷಿವನದಂತಹ ನೈಸರ್ಗಿಕ ಆವಾಸಸ್ಥಳಗಳ ನಿರ್ಮಾಣದ ಬಗ್ಗೆ ವಿವರಣೆ ನೀಡಲಿದ್ದಾರೆ. ಜೊತೆಗೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿದ ಸ್ವಚ್ಛತಾ ಅಭಿಯಾನಗಳು ಹಾಗೂ 46 ಗ್ರಾಮಗಳನ್ನು ಒಳಗೊಂಡ ಪ್ರತಿಷ್ಠಾನದ ಪ್ರಮುಖ ಉಪಕ್ರಮವಾದ ‘ಹಸಿರು ಸಂವಾದ’ದ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಈ ಯೋಜನೆಗೆ ಇನ್ನಷ್ಟು ವೇಗ ನೀಡಲು ‘ಆಳ್ವಾಸ್ ನುಡಿಸಿರಿ–ವಿರಾಸತ್’ ಅಂಗವಾಗಿ ಪರ್ಯಾವರಣ ಸಂರಕ್ಷಣಾ ತಂಡದ ಸಹಯೋಗದಲ್ಲಿ ‘ಹಸಿರು ಸಂವಾದ’ ಸಮ್ಮೇಳನವನ್ನು 2027ರ ಜನವರಿ 6 ಮತ್ತು 7ರಂದು ಹಮ್ಮಿಕೊಂಡಿರುವುದನ್ನೂ ಅವರು ಸಮ್ಮೇಳನದಲ್ಲಿ ಪ್ರಸ್ತಾಪಿಸಲಿದ್ದಾರೆ.

ಇದೇ ಸಮ್ಮೇಳನದಲ್ಲಿ ಆಳ್ವಾಸ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ವಿನಯ್ ಶಿವಮೂರ್ತಿಯವರು ‘ಮಧ್ಯ ಪಶ್ಚಿಮಘಟ್ಟಗಳ ಜಲಪರಿಸರಗಳಲ್ಲಿ ಪರಿಸರ ಹರಿವಿನ ಮೌಲ್ಯಮಾಪನದ ಮೂಲಕ ನದೀ ಪರಿಸರ ವ್ಯವಸ್ಥೆಗಳ ಸಂರಕ್ಷಣೆ’ ವಿಷಯದಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಭಾರತದ ಈ ನಿಯೋಗದಲ್ಲಿ ಬೆಂಗಳೂರು ಐಐಎಸ್‌ಸಿಯ ಡಾ. ಟಿ.ವಿ. ರಾಮಚಂದ್ರ, ಸುರತ್ಕಲ್ ಎನ್‌ಐಟಿಕೆಯ ಡಾ. ಶ್ವೇತಾ ಎಚ್.ಆರ್., ವಿಟಿಯುನ ಡಾ. ನಾಗರಾಜ್ ಎಸ್. ಪಾಟೀಲ್, ಚಾಣಕ್ಯ ವಿಶ್ವವಿದ್ಯಾಲಯದ ಡಾ. ಭರತ್ ಹಾಗೂ ಬೆಳಗಾವಿಯ ಅಂಗಡಿ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ. ಆನಂದ್ ದೇಶಪಾಂಡೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಬ್ರಿಕ್ಸ್ ರಾಷ್ಟ್ರಗಳ ನಡುವೆ ಪ್ರಾದೇಶಿಕ ಅನುಭವಗಳ ವಿನಿಮಯಕ್ಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಹೊಸ ದಾರಿ ತೆರೆಯಲಿದೆ.

Category
ಕರಾವಳಿ ತರಂಗಿಣಿ