ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಳ್ವಾಸ್ ವೆಲ್‌ನೆಸ್ ತರಬೇತಿ ಕೇಂದ್ರ, ಮನೋವಿಜ್ಞಾನ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗಗಳ ಜಂಟಿ ಆಶ್ರಯದಲ್ಲಿ ‘ನೀನು ಒಂಟಿಯಲ್ಲ - ಆತ್ಮಹತ್ಯೆ ಕುರಿತ ಮನೋಭಾವ ಬದಲಾವಣೆಗೆ ಮುಕ್ತ ಸಂವಾದ’ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಪಿಯು ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಲಿಝಿ ಸಾಜಿ, ಶಿಕ್ಷಕರ ಕರ್ತವ್ಯ ಕೇವಲ ಪಾಠ ಬೋಧನೆಗೆ ಸೀಮಿತವಾಗಿರದೆ ವಿದ್ಯಾರ್ಥಿಗಳ ಆತಂಕಗಳನ್ನು ಆಲಿಸಿ ಬೆಂಬಲವಾಗಿ ನಿಲ್ಲುವುದೂ ಆಗಿದೆ ಎಂದರು. ವಿದ್ಯಾರ್ಥಿಗಳಲ್ಲಿನ ಸೂಕ್ಷ್ಮ ವರ್ತನಾ ಬದಲಾವಣೆಗಳನ್ನು ಗಮನಿಸಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡುವುದು ಅಗತ್ಯ. ಸಮಸ್ಯೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವ ಬದಲು ವಿಶ್ವಾಸಾರ್ಹ ಶಿಕ್ಷಕರೊಂದಿಗೆ ಹಂಚಿಕೊಳ್ಳುವುದು ಪರಿಹಾರದತ್ತ ಮೊದಲ ಹೆಜ್ಜೆಯಾಗಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಅಭಯ ನೀಡಿದರು.
ಆಪ್ತ ಸಮಲೋಚಕಿ ರಾಧಿಕಾ ಅಡಪ್ಪಾ ಮಾತನಾಡಿ, ಜೀವನದ ಕಠಿಣ ಪರಿಸ್ಥಿತಿಗಳಲ್ಲಿ ನಕಾರಾತ್ಮಕ ಆಲೋಚನೆಗಳು ಬಂದಾಗ ಅವುಗಳನ್ನು ನಿರ್ಲಕ್ಷಿಸದೆ ಸೂಕ್ತ ವೃತ್ತಿಪರ ನೆರವು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
‘ಸಂಕಷ್ಟಗಳು ನಿಜ’, ‘ವಿಭಿನ್ನವಾಗಿ ಬದುಕುವುದು ಎಂದರೆ ಕಡಿಮೆಯಾಗಿ ಬದುಕುವುದಲ್ಲ’ ಹಾಗೂ ‘ಜೀವನ ಎಚ್ಚರಿಕೆಯಿಲ್ಲದೆ ಬದಲಾದಾಗ’ ಎಂಬ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳಾದ ಆಕಾಶ್ ಎಂ., ಕವನಾ, ರಾಹುಲ್ ಪಿಳ್ಳೈ, ಕೌಶಿಕ್ ಹಾಗೂ ಕನ್ನಡ ವಿಭಾಗದ ಡಾ. ಜ್ಯೋತಿ ರೈ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ್ಯ ಡಾ. ಕುರಿಯನ್, ವೆಲ್‌ನೆಸ್ ಕೇಂದ್ರದ ನಿರ್ದೇಶಕಿ ಡಾ. ದೀಪಾ ಕೊಠಾರಿ, ಸಹಾಯಕ ಪ್ರಾಧ್ಯಾಪಕಿ ವೈದೇಹಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಅಝಾನಾ ಕಾರ್ಯಕ್ರಮ ನಿರೂಪಿಸಿ, ಅಯೋನಾ ಧನ್ಯವಾದ ಸಮರ್ಪಿಸಿದರು.