image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೃಷಿ ಕೋಟಾದಡಿ 3,200 ಸೀಟು: ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆ ಕುರಿತು ಮಾರ್ಗದರ್ಶನ

ಕೃಷಿ ಕೋಟಾದಡಿ 3,200 ಸೀಟು: ಆಳ್ವಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆ ಕುರಿತು ಮಾರ್ಗದರ್ಶನ

ಮೂಡುಬಿದಿರೆ: ಕರ್ನಾಟಕ ಸರ್ಕಾರವು ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ಶಿಕ್ಷಣದಲ್ಲಿ 3,200 ಸೀಟುಗಳನ್ನು ಮೀಸಲಿಟ್ಟಿದ್ದು, ಈ ಅವಕಾಶವನ್ನು ಪಡೆಯಲು ವಿದ್ಯಾರ್ಥಿಗಳು ಅರ್ಹತೆ, ಪ್ರಾಯೋಗಿಕ ಪರೀಕ್ಷೆಯ ಸಿದ್ಧತೆ ಹಾಗೂ ಪ್ರವೇಶ ಪ್ರಕ್ರಿಯೆಯ ಕುರಿತು ಸಮಗ್ರ ಅರಿವು ಹೊಂದಿರಬೇಕು ಎಂದು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯ ಡೀನ್ ಡಾ. ಎಸ್.ಎನ್. ವಾಸುದೇವ ಜೈನ್ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ‘ಕೃಷಿಕರ ಕೋಟಾದಡಿ ಕೃಷಿ ಪ್ರಾಯೋಗಿಕ ಪರೀಕ್ಷೆಗಳ’ ಕುರಿತ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶನ ನೀಡಿದರು.

ಕೃಷಿ ಕ್ಷೇತ್ರವು ದೇಶದ ಆರ್ಥಿಕತೆ ಹಾಗೂ ಆಹಾರ ಭದ್ರತೆಯ ಪ್ರಮುಖ ಆಧಾರವಾಗಿದ್ದು, ಸುಮಾರು 80 ಕೋಟಿ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು ಡಾ. ಜೈನ್ ತಿಳಿಸಿದರು. ಕೈಗಾರಿಕೀಕರಣ ಸೇರಿದಂತೆ ವಿವಿಧ ಕಾರಣಗಳಿಂದ ಕೃಷಿ ಭೂಮಿ ವಿಸ್ತರಣೆಗೆ ಮಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಲಭ್ಯವಿರುವ ಭೂಮಿ ಮತ್ತು ನೀರನ್ನು ಸಮರ್ಥವಾಗಿ ಬಳಸಿ ಉತ್ಪಾದಕತೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಪ್ರಧಾನಿಯವರ 'ಪರ್ ಡ್ರಾಪ್, ಮೋರ್ ಕ್ರಾಪ್' ಪರಿಕಲ್ಪನೆಯಂತೆ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ವೈಜ್ಞಾನಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೊತೆಗೆ ಕೃಷಿ ಕೋಟಾದ ಮೀಸಲಾತಿ, ಅರ್ಹತಾ ಮಾನದಂಡಗಳು, ಪ್ರಾಯೋಗಿಕ ಪರೀಕ್ಷೆ ಎದುರಿಸುವ ವಿಧಾನ ಹಾಗೂ ವಿವಿಧ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸಾದಕತ್ ಮಾತನಾಡಿ, ಆಳ್ವಾಸ್ ಸಂಸ್ಥೆಯು ಕರಾವಳಿಯಲ್ಲಿ ಕೃಷಿ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ್ದು, ಕಳೆದ ವರ್ಷ ಸಂಸ್ಥೆಯ ವಿದ್ಯಾರ್ಥಿಯೊಬ್ಬರು ಕೃಷಿ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳು ಈ ಕೃಷಿ ಶಿಕ್ಷಣದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಉಪಸ್ಥಿತರಿದ್ದರು. ವೇದಾವತಿ ಎ. ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ಗುಣಪ್ರಸಾದ್ ಕರಂದೂರು ವಂದಿಸಿದರು.

Category
ಕರಾವಳಿ ತರಂಗಿಣಿ