image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಮಕೃಷ್ಣ ಮಠದಲ್ಲಿ 'ಪ್ರಜ್ಞಾ - 2026' ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ: ಯಶಸ್ಸಿನ ಜೊತೆಗೆ ಉತ್ತಮ ಸಮಾಜ ನಿರ್ಮಿಸಿ – ಡಾ. ಕೆ. ಪ್ರಕಾಶ್ ಶೆಟ್ಟಿ

ರಾಮಕೃಷ್ಣ ಮಠದಲ್ಲಿ 'ಪ್ರಜ್ಞಾ - 2026' ಶೈಕ್ಷಣಿಕ ವಿಚಾರ ಸಂಕಿರಣ ಸಂಪನ್ನ: ಯಶಸ್ಸಿನ ಜೊತೆಗೆ ಉತ್ತಮ ಸಮಾಜ ನಿರ್ಮಿಸಿ – ಡಾ. ಕೆ. ಪ್ರಕಾಶ್ ಶೆಟ್ಟಿ

ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗಾಗಿ 'ಪ್ರಜ್ಞಾ - 2026' ಶೈಕ್ಷಣಿಕ ವಿಚಾರ ಸಂಕಿರಣವು ಯಶಸ್ವಿಯಾಗಿ ನೆರವೇರಿತು. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥವಾಗಿ “ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದ ಉನ್ನತಿಯತ್ತ: ಚಾರಿತ್ರ್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ” ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಎಂ.ಆರ್.ಜಿ. ಗ್ರೂಪ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸುವುದರ ಜೊತೆಗೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು” ಎಂದು ಕರೆ ನೀಡಿದರು. ಸ್ವಾಮಿ ವಿವೇಕಾನಂದರ ಆತ್ಮವಿಶ್ವಾಸ ಹಾಗೂ ದೇಶದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ಮೇಲಿನ ನಂಬಿಕೆ ಅಪಾರವಾದುದು. ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳು ಜೀವನವನ್ನು ಬದಲಾಯಿಸಬಲ್ಲವು. ಕೆಲಸ-ಕಾರ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಅವರು ತಿಳಿಸಿದರು. ಇದೇ ವೇಳೆ ರಾಮಕೃಷ್ಣ ಮಠ ಮತ್ತು ಮಿಷನ್‌ನ ವಿವಿಧ ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳನ್ನು ಅವರು ಪ್ರಶಂಸಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, "ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಅಗತ್ಯ ಸೌಲಭ್ಯ ಹಾಗೂ ಹಲವು ಅವಕಾಶಗಳಿವೆ. ಅವುಗಳ ಸದುಪಯೋಗ ಪಡೆದುಕೊಂಡು ಯಶಸ್ಸು ಸಾಧಿಸಬೇಕು. ಸ್ವಚ್ಛ ಮನಸ್ಸಿನಿಂದ ಮಾತ್ರ ಸ್ವಚ್ಛ ಸಮಾಜ ಹಾಗೂ ದೇಶವನ್ನು ನಿರ್ಮಿಸಲು ಸಾಧ್ಯ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ" ಎಂದು ಹೇಳಿದರು.

ಉದ್ಘಾಟನೆಯ ನಂತರ ನಡೆದ ವಿಶೇಷ ಗೋಷ್ಠಿಗಳಲ್ಲಿ ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತೇಶಾನಂದಜಿ ಹಾಗೂ ಮುಕುಂದ್ ರಿಯಾಲಿಟಿ ಮತ್ತು ವರ್ಟೆಕ್ಸ್ ಮ್ಯಾನೇಜ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಉಪನ್ಯಾಸ ನೀಡಿದರು. ತದನಂತರ “ಪದವಿ ಒಂದು ಆರಂಭ; ಕೌಶಲ್ಯ, ಮನೋಭಾವ ಮತ್ತು ಸೇವೆಯೇ ಅರ್ಥಪೂರ್ಣ ವೃತ್ತಿಜೀವನದ ದಾರಿ” ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಇದರಲ್ಲಿ ಡಾ. ರೋನಾಲ್ಡ್ ಸಿಕ್ವೇರಾ, ಡಾ. ಕೆ. ಟಿ. ಶ್ವೇತಾ ಹಾಗೂ ದೀಪಕ್ ರಾಜ್ ಭಾಗವಹಿಸಿದ್ದರು. ವೈಶಾಖ್ ಕೆ. ಪಿ. ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು. ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್ ವಂದಿಸಿದರು. ರೆಜಿನಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ಮಂಗಲ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್, ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆನರಾ ಕಾಲೇಜ್ ಆಫ್ ಎಂಜಿನಿಯರಿಂಗ್, ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್, സഹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್, ಸೇಂಟ್ ಅಲೋಶಿಯಸ್ ಸ್ಕೂಲ್ ಆಫ್ ಲಾ, ಸಿಟಿ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಶ್ರೀನಿವಾಸ್ ಯೂನಿವರ್ಸಿಟಿ ಮುಕ್ಕ ಸಂಸ್ಥೆಗಳಿಂದ ಸುಮಾರು 750ಕ್ಕೂ ಹೆಚ್ಚು ವೃತ್ತಿಪರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ