ಮಂಗಳೂರು: ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ಮೂಲದ ಮರಾಟಿಗರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ದಿನಾಂಕ: 10-11-2024 ಆದಿತ್ಯವಾರದಂದು ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ 'ಗದ್ದಿಗೆ' ಕರಾವಳಿ ಮರಾಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗದ್ದಿಗೆ, ಕರಾವಳಿ ಮರಾಟಿ ಸಮಾವೇಶ 2024ರ ಅಧ್ಯಕ್ಷರಾದ ಹೆಚ್. ರಾಜೇಶ್ ಪ್ರಸಾದ್ IAS ಹೇಳೀದರು. ಅವರು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಾದ್ಯಂತ ಅಂದರೆ ದ.ಕ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡಿನಲ್ಲಿ ಮರಾಟಿ ಜನರು ಪಸರಿಸಿದ್ದಾರೆ. ಇದೀಗ 22 ವರ್ಷಗಳ ಬಳಿಕ ಸಮಾವೇಶ ನಡೆಯಲಿದ್ದು ನಮ್ಮ ಈ ಸಮಾವೇಶವು ಮುಖ್ಯವಾಗಿ ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧೈಯಘೋಷವನ್ನು ಹೊಂದಿದ್ದೆ. ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ನಮ್ಮ ಸಮುದಾಯದ ಸುಮಾರು ಶೇಕಾಡ 80 ರಷ್ಟು ಜನ ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು ಇವರು ಅನೇಕ ಸಮಸ್ಯೆಗಳನ್ನು ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ, ಹಾಗೂ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನಾವರಣೆ ಮಡುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸುಮಾರು 15 ರಿಂದ 20 ಸಾವಿರ ಜನ ಭಾಗವಹಿಸುವವರಿದ್ದಾರೆ ಎಂದರು. ಈ ಸಮಾವೇಶದಲ್ಲಿ ಮರಾಟಿಗರ ವಿವಿಧ ಆಚಾರ-ವಿಚಾರ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ, ಮೂರು ಗೋಷ್ಠಿಗಳು, ಉಪನ್ಯಾಸ ಹಾಗೂ ಸನ್ಮಾನ ಮತ್ತು ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯಮಂತ್ರಿಗಳಾದ ಸಮ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ನಮ್ಮ ಬಹು ನಿರೀಕ್ಷೆಯ “ಗದ್ದಿಗೆ” ಸ್ಮರಣ ಸಂಚಿಕೆಯನ್ನು ಡಾ. ಎಂ. ಮೋಹನ್ ಆಳ್ವರವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಮಾಜದ ಶ್ರೇಷ್ಠ ಸಾಧನೆಯನ್ನು ಮಾಡಿರುವ ಪದ್ಮಶ್ರೀ ಪುರಸ್ಕೃತರಾದ ಅಮ್ಮ ಶ್ರೀ ಮಹಾಲಿಂಗ ನಾಯ್ಕರವರನ್ನು ಸನ್ಮಾನ ಮಾಡಲಾಗುವುದು. ಮರಾಟಿಗರ ಅಹವಾಲುಗಳನ್ನು ನಮ್ಮ ಸಮಾವೇಶದ ಗೌರವಾಧ್ಯಕ್ಷರಾದ ಶ್ರೀ ಡಾ.ಕೆ.ಸುಂದರ್ ನಾಯಕ್ ರವರು ಮಾನ್ಯ ಮುಖ್ಯ ಮಂತ್ರಿಗಳಿಗೆ ಅರ್ಪಿಸಲಿದ್ದಾರೆ. ಹಾಗೆಯೇ ರಾಷ್ಟ್ರಮಟ್ಟದಲ್ಲಿ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ ಸಮಾಜದ ಅನೇಕ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಹಾಗೆಯೇ 09-11-2024 ರಂದು ಕರ್ನಾಟಕ ಮರಾಟಿ ಸಂಘ (ರಿ.) ಬೆಂಗಳೂರು ಇವರ ಸಹಕಾರದಿಂದ ಮರಾಟಿಗರಿಗಾಗಿಯೇ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು ಈಗಾಗಲೇ 1500ಕ್ಕೂ ಹೆಚ್ಚು ಮರಾಟಿ ಉದ್ಯೋಗಾಕಾಂಕ್ಷಿಗಳು ತಮ್ಮ
ಹೆಸರನ್ನು ನೋಂದಾಯಿಸಿದ್ದಾರೆ, ಸುಮಾರು 30ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಈ ಸಮಾವೇಶದ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ದೂರದ ಊರಿನ ಮರಾಟಿ ಬಂಧುಗಳಿಗೆ ವಸತಿ ವ್ಯವಸ್ಥೆ ಮತ್ತು ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಂ. ಮೋಹನ್ ಆಳ್ವ, ಶ್ರೀ ಎನ್. ಎಸ್ ಮಂಜುನಾಥ್, ಶ್ರೀಮತಿ ರತಿ ಪ್ರಭಾಕರ ನಾಯ್ಕ, ಹಾಗೂ ಶ್ರೀ ಪ್ರವೀಣ್ ಕುಮಾರ್ ಮುಗುಳಿ ನಮ್ಮೊಂದಿಗೆ ಸಹಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ ಖಾದರ್, ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಎಚ್. ಸಿ. ಮಹದೇವಪ್ಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ, ಮಾನ್ಯ ಶಾಸಕರುಗಳಾದ ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಐವನ್ ಡಿ'ಸೋಜ, ಮಾಜಿ ಸಚಿವರುಗಳಾದ ಶ್ರೀ ಕೆ.ಆಭಯಚಂದ್ರ ಜೈನ್, ಶ್ರೀ ವಿನಯ ಕುಮಾರ್ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಉಡುಪಿ- ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀ ಶ್ರೀನಿವಾಸ ಪೂಜಾರಿ, ದ.ಕ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ಡಾ.ಎಂ ಮೋಹನ್ ಆಳ್ವ, ಕೆನರಾ ಬ್ಯಾಂಕ್ ಜಿ.ಎಂ. ಶ್ರೀ ರಾಮ ನಾಯ್ಕ, ದ.ಕ, ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ನಮ್ಮ ಸಮಾಜದ ಜಮ್ಮು-ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್. ರಾಜೇಶ್ ಪ್ರಸಾದ್ IAS ರವರು ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ನಮ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದರು. ಈ ಸಮಾವೇಶದ ಯಶಸ್ಸಿಗಾಗಿ ಈಗಾಗಲೇ 33 ಸಮಿತಿಗಳನ್ನು ರಚಿಸಲಾಗಿದ್ದು, ವಿವಿಧ ಜವಾಬ್ದಾರಿಗಳನ್ನು ಇವರಿಗೆ ಹಂಚಲಾಗಿದೆ. ಈ ಸಮಾವೇಶಕ್ಕೆ ನಮ್ಮೆಲ್ಲ ಬಂಧುಗಳು ಬಂದು ಸಹಕರಿಸಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಚಂದ್ರ ಕೆಂಬಾರೆ ಕಾರ್ಯಾಧ್ಯಕ್ಷರು, ಡಾ.ಕೆ ಸುಂದರ ನಾಯ್ಕ್, ಗೌರವಾಧ್ಯಕ್ಷರು, ರತ್ನಾವತಿ, ಎನ್ ವಿಶ್ವನಾಥ್ ನಾಯ್ಕ್, ಮಹಾಲಿಂಗ ನಾಯ್ಕ್, ಗೌತಮ್ ಉಪಸ್ಥಿತರಿದ್ದರು.