ಮಂಗಳೂರು: ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಸಮಾಜ ಸೇವಾ ಚಿಂತಕರ 'ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್' ವತಿಯಿಂದ ಸುಮಾರು 80 ಲೀಟರ್ ಸಾಮರ್ಥ್ಯದ ವಿನೂತನ ಡಿಜಿಟಲ್ ಮಾದರಿಯ 'ತ್ರೀ ಇನ್ ಒನ್' ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಕೊಡುಗೆಯಾಗಿ ನೀಡಲಾಗಿದ್ದು, ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.
ಉಪಕರಣವನ್ನು ಸ್ವೀಕರಿಸಿ ಮಾತನಾಡಿದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್., ಇಂತಹ ಕ್ರಿಯಾತ್ಮಕ ಹಾಗೂ ಚಿಂತನಾತ್ಮಕ ಕೊಡುಗೆಗಳು ಮಹಿಳೆಯರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಸೋಂಕುರಹಿತ ಪರಿಶುದ್ಧ ನೀರು ದೈಹಿಕ ಸಾಮರ್ಥ್ಯ ನೀಡುವ ಜತೆಗೆ ಅವರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಅಧ್ಯಕ್ಷ ಶಮೀಮ್ ಕುಟ್ಟಿಕಳ ಮಾತನಾಡಿ, ಆರೋಗ್ಯ ಸೇವೆಯನ್ನು ಅರಸಿ ಬರುವ ಪ್ರತಿಯೊಬ್ಬ ಫಲಾನುಭವಿ ಮಹಿಳೆಯೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಉನ್ನತ ಉದ್ದೇಶದಿಂದ ಈ ಕೊಡುಗೆ ನೀಡಲಾಗಿದೆ ಎಂದರು. ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹನೀಫ್ ಸಾಲೆತ್ತೂರು, ಶಕೀಲ್ ಹೈದರ್, ಹಬೀಬ್ ಉಳಾಯಿಬೆಟ್ಟು, ರಶೀದ್ ಗಡಿಯಾರ್, ಹಿರಿಯ ತಜ್ಞ ಡಾ. ದಯಾನಂದ್, ಶುಶ್ರೂಷಾಧೀಕ್ಷಕಿ ಗೀತಾ ಹಾಗೂ ನರ್ಸಿಂಗ್ ಸೂಪರ್‌ವೈಸರ್ ಮಲ್ಲಿಕಾ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.