image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ರಾಮಕೃಷ್ಣ ಮಠದಲ್ಲಿ 'ಮೇಧಾ 2026' ಶೈಕ್ಷಣಿಕ ವಿಚಾರ ಸಂಕಿರಣ

ಮಂಗಳೂರು ರಾಮಕೃಷ್ಣ ಮಠದಲ್ಲಿ 'ಮೇಧಾ 2026' ಶೈಕ್ಷಣಿಕ ವಿಚಾರ ಸಂಕಿರಣ

ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ 'ಮೇಧಾ 2026' ಶೈಕ್ಷಣಿಕ ವಿಚಾರ ಸಂಕಿರಣದ ಎರಡನೇ ದಿನದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದ ಉನ್ನತಿಯತ್ತ: ಚಾರಿತ್ರ್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ” ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಚ್. ಎಸ್. ಶೆಟ್ಟಿ ಅವರು, ಶಿಕ್ಷಣವು ಕೇವಲ ಉದ್ಯೋಗ ಅಥವಾ ಕೆಲಸ ಸಂಪಾದನೆಗೆ ಸೀಮಿತವಾಗದೆ ಜ್ಞಾನ ಸಂಪಾದನೆಯ ಮುಖ್ಯ ಉದ್ದೇಶವನ್ನು ಹೊಂದಿರಬೇಕು ಎಂದರು. ಶಿಕ್ಷಣವು ಭಾರತೀಯತೆ ಹಾಗೂ ನಮ್ಮ ನೆಲದ ಸಂಸ್ಕೃತಿಯೊಂದಿಗೆ ಬೆರೆತಾಗ ಮಾತ್ರ ಪರಿಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಆತ್ಮಾಭಿಮಾನದಿಂದ ನಿಸ್ವಾರ್ಥವಾಗಿ ಜ್ಞಾನವನ್ನು ಹಂಚುವ ಕಾಯಕ ಮಾಡಿದಾಗ ಉನ್ನತ ಸ್ಥಾನಕ್ಕೇರಲು ಸಾಧ್ಯ ಹಾಗೂ ರಾಮಕೃಷ್ಣ ಆಶ್ರಮದಂತಹ ಸಂಸ್ಥೆಗಳು ಆಧುನಿಕ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸುವ ಶ್ರೇಷ್ಠ ಕೆಲಸ ಮಾಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಎಂ.ಆರ್.ಪಿ.ಎಲ್. ಸಂಸ್ಥೆಯ ಮುಖ್ಯ ಮಹಾಪ್ರಬಂಧಕರಾದ ಪ್ರಶಾಂತ್ ಪೊದುವಾಳ್ ಅವರು ಮಾತನಾಡಿ, ರಾಮಕೃಷ್ಣ ಮಿಷನ್ ಹಾಗೂ ಎಂ.ಆರ್.ಪಿ.ಎಲ್ ನಡುವಿನ ಸಂಬಂಧವು ಕೇವಲ ಸಂಸ್ಥೆಗಳ ಪಾಲುದಾರಿಕೆಯಲ್ಲ, ಬದಲಿಗೆ ಸಮೃದ್ಧ ಮತ್ತು ಮೌಲ್ಯಯುತ ಸಮಾಜ ನಿರ್ಮಾಣದ ಕಡೆಗಿನ ಬದ್ಧತೆಯಾಗಿದೆ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಯರ ಜೊತೆಗೆ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಮೌಲ್ಯಗಳನ್ನು ಬೆಳೆಸುವ ಮೂಲಕ ಸಮಾಜದಲ್ಲಿ ಜ್ಞಾನದ ದೀಪಗಳನ್ನು ಬೆಳಗಿಸಬೇಕು ಎಂದು ಕರೆ ನೀಡಿದರು.

ಈ ಸಮಾರಂಭದಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ. ಎಂ. ವಿಶೇಷ ಆಹ್ವಾನಿತರಾಗಿ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತೇಶಾನಂದಜಿ ಹಾಗೂ ಉಡುಪಿಯ ಚಿಂತಕ ದಾಮೋದರ ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು. ತದನಂತರ ನಡೆದ “ಸಾರ್ಥಕ ಬೋಧನೆ: ತರಗತಿಯಾಚೆ ಬದುಕಿನ ಪಾಠಗಳು” ಎಂಬ ಸಂವಾದದಲ್ಲಿ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಶಿಕ್ಷಣತಜ್ಞ ಡಾ. ಕುಮಾರ ಸ್ವಾಮಿ ಎಚ್. ಹಾಗೂ ಮಾನವ ಸಂಪನ್ಮೂಲ ತರಬೇತುದಾರರಾದ ಸೌಜನ್ಯ ಹೆಗ್ಡೆ ಭಾಗವಹಿಸಿದ್ದು, ಡಾ. ವಿಜಯ ಸರಸ್ವತಿ ಬಿ. ಸಂವಾದ ನಿರ್ವಹಿಸಿದರು.

ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಶ್ರೀವತ್ಸ ನೀರ್ಚಾಲು ವಂದಿಸಿದರು ಹಾಗೂ ಸಂತೋಷ್ ಆಳ್ವ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಈ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಶಿಕ್ಷಣ ಮಹಾವಿದ್ಯಾಲಯಗಳ ಪ್ರಶಿಕ್ಷಣಾರ್ಥಿಗಳು, ಎನ್‌ಎಸ್‌ಎಸ್ ಸಂಯೋಜಕರು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ಮೂರನೇ ದಿನದ 'ಪ್ರಜ್ಞಾ - 2025' ವಿಚಾರ ಸಂಕಿರಣವು ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗಾಗಿ 11 ಸೆಪ್ಟೆಂಬರ್ 2026 ರಂದು ನಡೆಯಲಿದೆ.

Category
ಕರಾವಳಿ ತರಂಗಿಣಿ