image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ, ಮಾನಸಿಕ ಶಾಂತಿ: ಉಜಿರೆಯಲ್ಲಿ 'ಎಸ್.ಡಿ.ಎಂ. ಆರೋಹಂ' ಉತ್ಸವ ಉದ್ಘಾಟನೆ

ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ, ಮಾನಸಿಕ ಶಾಂತಿ: ಉಜಿರೆಯಲ್ಲಿ 'ಎಸ್.ಡಿ.ಎಂ. ಆರೋಹಂ' ಉತ್ಸವ ಉದ್ಘಾಟನೆ

ಉಜಿರೆ: ವಿದ್ಯೆಯ ಜೊತೆಗೆ ಕ್ರೀಡೆ, ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನದೊಂದಿಗೆ ಮಾನಸಿಕ ಶಾಂತಿ, ತೃಪ್ತಿ ಮತ್ತು ಸಂತೋಷ ಲಭಿಸುತ್ತದೆ ಎಂದು ಬೆಂಗಳೂರು ನೆಲಮಂಗಲದ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಹೇಳಿದರು.

ಅವರು ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ 'ಎಸ್.ಡಿ.ಎಂ. ಆರೋಹಂ' ಅನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ದಕ್ಷ ನೇತೃತ್ವದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯಕ್ರಮ ಸಂಘಟಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಇಂತಹ ಉತ್ಸವಗಳು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ, ಸಂವಹನ ಕೌಶಲ, ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ವೃದ್ಧಿಸುತ್ತವೆ ಎಂದರು. ಇದೇ ವೇಳೆ, ಮನುಷ್ಯರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಬದಲು ನಮಗೆ ಬೇಕಾದಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶುಭಾಶಂಸನೆ ನೆರವೇರಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆಯಿದ್ದು, ಪಠ್ಯೇತರ ಚಟುವಟಿಕೆಗಳು ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಸಾರ್ಥಕ ಬದುಕಿಗೆ ಬೇಕಾದ ಜೀವನ ಶಿಕ್ಷಣವನ್ನು ನೀಡುತ್ತವೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ನಂದಕುಮಾರಿ ಹಾಗೂ ಉತ್ಸವದ ಸಂಘಟಕ ಗಣೇಶ ನಾಯಕ್ ಉಪಸ್ಥಿತರಿದ್ದರು. ಡಾ. ದಿವಾಕರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಈ ಉತ್ಸವದ ಸ್ಪರ್ಧೆಗಳಲ್ಲಿ ರಾಜ್ಯದ ೧೭ ಪದವಿ ಕಾಲೇಜುಗಳು ಹಾಗೂ ೨೦ ಪದವಿಪೂರ್ವ ಕಾಲೇಜುಗಳಿಂದ ೧,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ