ಮಂಗಳೂರು: ನಗರದ ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 13ರಿಂದ 15ರವರೆಗೆ ಊರ ಹಾಗೂ ಪರಊರ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆಪ್ಟೆಂಬರ್ 13ರಂದು ಸಂಜೆ 4:00 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ವಿಘ್ನೇಶ್ವರನ ವಿಗ್ರಹ ಹಾಗೂ ರಂಗಪೂಜೆಗೆ ಬೇಕಾಗುವ ಸಾಮಾಗ್ರಿಗಳ ಮೆರವಣಿಗೆ ನಡೆಯಲಿದೆ. ಅಂದು ಸಂಜೆ 6:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಖ್ಯಾತ ಗಣ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ನಂತರ ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ದಿನೇಶ್ ಕೊಡಪದವು ಅವರ ಸಾರಥ್ಯದಲ್ಲಿ 'ಯಕ್ಷ ತೆಲಿಿಕೆ' ಯಕ್ಷ ಹಾಸ್ಯ ವೈಭವ ಕಾರ್ಯಕ್ರಮ ಜರುಗಲಿದೆ.
ಎರಡನೇ ದಿನವಾದ ಸೆಪ್ಟೆಂಬರ್ 14ರ ಸೋಮವಾರ ಬೆಳಿಗ್ಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಹಸಿರು ತನೆ ವಿತರಣೆ, ಭಜನಾ ಕಾರ್ಯಕ್ರಮ, ತುತ್ತು ಕಂಬಳ ಹಾಗೂ ಸಂಜೆ ಶ್ರೀ ಮುಕಾಂಬಿಕಾ ಯಕ್ಷಗಾನ ತರಬೇತಿ ಕೇಂದ್ರ ಮಂಗಲಾ ದೇವಿ ಇವರ ಕಲಾವಿದರ ಅಭಿನಯದಲ್ಲಿ 'ಸಿರಿ ಕೃಷ್ಣ ಚಂದಪಾಲ' ತುಳು ಯಕ್ಷಗಾನ ಮತ್ತು ರಾತ್ರಿ 'ಸಂಗೀತ ಗಾನ ಸಂಭ್ರಮ' ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 15ರ ಮಂಗಳವಾರದಂದು ಬೆಳಿಗ್ಗೆ 108 ತೆಂಕಿನಕಾಯಿಯ ಮಹಾಗಣಯಾಗ, ಪಾಂಚಜನ್ಯ ಪ್ರತಿಷ್ಠಾನ ಕುದ್ರು ಇವರ ಕಲಾವಿದರಿಂದ 'ಮಂಗಳಾಂಭೆ' ಭಕ್ತಿ ಪ್ರಧಾನ ಪೌರಾಣಿಕ ನೃತ್ಯ ನಾಟಕ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ಹಾಗೂ ರಾತ್ರಿ ವಿವಿಧ ಕುಣಿತ ಭಜನೆ, ವಾಧ್ಯಗಳೊಂದಿಗೆ ಶ್ರೀ ವಿಘ್ನೇಶ್ವರ ದೇವರ ಭವ್ಯ ಶೋಭಾಯಾತ್ರೆ ನಡೆದು ಕೇಕಾರ್ ನೇತ್ರಾವತಿ ನದಿ ತೀರದಲ್ಲಿ ಜಲಾಧಿವಾಸ ನೆರವೇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಸುಧಾಕರ ಜೆ., ಲಾ. ಶ್ರೀಧರ್ ರಾಜ್ ಶೆಟ್ಟಿ, ಉದಯಕುಮಾರ್ ಕೊಟ್ಟಾರಿ, ಲಾ. ಗಣೇಶ್ ಶೆಟ್ಟಿ ಕಂಬಳಟ್ಟು, ಬಾಲಕೃಷ್ಣ ಶೆಟ್ಟಿ, ಪ್ರಧಾನ ಕೋಶಾಧಿಕಾರಿ ಶೈಲೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುಭಾಷ್ ವಿ. ಅದ್ಪ, ಪ್ರಧಾನ ಸಂಚಾಲಕರಾದ ಜಿ. ಪ್ರಶೋತ್ ರಾವ್, ಶಿವಾನಂದ ರಾವ್ ಬಜೀಟ್ಟು, ಸಂಚಾಲಕರಾದ ರಾಜೇಶ್ ಕೊಟ್ಟಾರಿ, ಸುರೇಶ್ ಬಂಗೇರ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.