ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ 'ಶ್ರದ್ಧಾ' ಶೈಕ್ಷಣಿಕ ವಿಚಾರ ಸಂಕಿರಣವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 'ಶೆಫ್ ಟಾಲ್ಕ್ ಫುಡ್ & ಹಾಸ್ಪಿಟಾಲಿಟಿ' ಸಂಸ್ಥೆಯ ಸ್ಥಾಪಕರು ಹಾಗೂ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರು, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು. ಎಷ್ಟೇ ಉನ್ನತ ಶಿಕ್ಷಣ ಪಡೆದರೂ ನಮ್ಮ ಊರು, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಎಂದಿಗೂ ಮರೆಯಬಾರದು ಮತ್ತು ಜೀವನದಲ್ಲಿ ಒಂದು ಕನಸನ್ನು ಇಟ್ಟುಕೊಂಡು ಅದನ್ನು ನನಸಾಗಿಸಲು ನಿರಂತರವಾಗಿ ಪರಿಶ್ರಮಿಸಬೇಕು, ಜೊತೆಗೆ ಇನ್ನೊಬ್ಬರ ಕನಸನ್ನು ನನಸಾಗಿಸಲು ಸಹ ಶ್ರಮಿಸಬೇಕು ಎಂದು ಕರೆ ನೀಡಿದರು.
ಆಧುನಿಕ ಯುವ ಪೀಳಿಗೆಯಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರಾಮಕೃಷ್ಣ ಮಿಷನ್ ಈ ಮೌಲ್ಯಾಧಾರಿತ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ 12 ವರ್ಷಗಳಿಂದ, 1893ರ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ನೀಡಿದ ಐತಿಹಾಸಿಕ ಭಾಷಣದ ಸ್ಮರಣಾರ್ಥವಾಗಿ "ಶಿಕ್ಷಣದಿಂದ ಸಬಲೀಕರಣದತ್ತ, ಸಬಲೀಕರಣದಿಂದ ಉನ್ನತಿಯತ್ತ: ಚಾರಿತ್ಯ ಮತ್ತು ಸೇವೆಯಿಂದ ಬದುಕಿನ ನಿರ್ಮಾಣ" ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಈ ಸಮಾವೇಶ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಅವರು ಮಾತನಾಡಿ, ಸಮಾಜ ಸೇವೆಯನ್ನು ಮಾನವ ಸೇವೆಯೆಂದು ಪರಿಗಣಿಸಬೇಕು ಹಾಗೂ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತದ ಪ್ರಗತಿ ಎಂದರೆ ಇಡೀ ಮಾನವ ಸಮಾಜದ ಪ್ರಗತಿ ಎಂದರ್ಥ ಎಂದರು. ನಿಜವಾದ ಬೆಳವಣಿಗೆ ಎಂದರೆ ಒಬ್ಬರ ಏಳಿಗೆಯೊಂದಿಗೆ ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವುದಾಗಿದೆ. ಜಾತಿ, ಮತ, ವರ್ಗದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಬೆಳೆಸುವ ಕಾರ್ಯವನ್ನು ರಾಮಕೃಷ್ಣ ಮಠ ಮಾಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳನ್ನು ಬಿತ್ತುವಲ್ಲಿ 'ಶ್ರದ್ಧಾ'ದಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ನಂತರ ವಿವಿಧ ಶೈಕ್ಷಣಿಕ ಅವಧಿಗಳು ಹಾಗೂ ಸಂವಾದ ಕಾರ್ಯಕ್ರಮ ನಡೆದವು. ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ಯುಕ್ತಶಾನಂದಜಿ ಹಾಗೂ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಷಣ ಮಾಡಿದರು. ನಂತರ “ವೇತನದಾಚೆಗೆ: ಉದ್ಯೋಗವನ್ನು ಅರ್ಥಪೂರ್ಣವಾಗಿಸುವುದು ಯಾವುದು?” ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಮನಶಾಂತಿ ಸಂಸ್ಥೆಯ ನಿರ್ದೇಶಕರಾದ ಡಾ. ರಮೀಲಾ ಶೇಖರ್, ಎಐ ಲಾಜಿಕ್ಸ್‌ನ ಸ್ಥಾಪಕರು ಹಾಗೂ ತಾಂತ್ರಿಕ ನಿರ್ದೇಶಕರಾದ ಪ್ರವೀಣ್ ಉಡುಪ ಮತ್ತು ಇನ್ವೆಂಜರ್ ಟೆಕ್ನಾಲಜೀಸ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಕೃತಿಕಾ ಸರಳಾಯ ಭಾಗವಹಿಸಿದ್ದರು. ಎಸ್. ಡಿ. ಎಮ್. ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಸೀಮಾ ಎಸ್. ಶೆಣೈ ಈ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗಡೆ ವಂದಿಸಿದರು, ಹಾಗೂ ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಈ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀನಿವಾಸ ವಿಶ್ವವಿದ್ಯಾಲಯ (ಪಾಂಡೇಶ್ವರ ಹಾಗೂ ಐ.ಸಿ.ಐ.ಎಸ್.), ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ, ಆಳ್ವಾಸ್ ಕಾಲೇಜು ಮೂಡುಬಿದಿರೆ, ವಿವೇಕಾನಂದ ಕಾಲೇಜು ಪುತ್ತೂರು, ಸಂತ ಅಲೋಶಿಯಸ್ ಕಾಲೇಜು, ಡಾ. ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟ್ರೀಟ್, ಗೋವಿಂದ ದಾಸ ಕಾಲೇಜು ಸುರತ್ಕಲ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ, ಸಹ್ಯಾದ್ರಿ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಅಡ್ಯಾರ್ ಹಾಗೂ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 600ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ, ಶಿಕ್ಷಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಎರಡನೇ ದಿನದ ವಿಚಾರ ಸಂಕಿರಣ 'ಮೇಧಾ 2026' ಸೆಪ್ಟೆಂಬರ್ 10, 2026 ರಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.