ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯ ಕೆಥೋಲಿಕ್ ಬಾಂಧವರ ಸಾಂಪ್ರದಾಯಿಕ ಸುಗ್ಗಿ ಹಬ್ಬ ಹಾಗೂ ಕನ್ಯಾ ಮರಿಯಮ್ಮನವರ ಜನ್ಮದಿನೋತ್ಸವವನ್ನು (ಮೊಂತಿ ಫೆಸ್ಟ್) ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯಲ್ಲಿ (FMCI) ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಆಚರಣೆಯ ಅಂಗವಾಗಿ ಸಂಸ್ಥೆಯ ನಿರ್ದೇಶಕರಾದ ವಂ. ಫಾ. ಫೌಸ್ಟಿನ್ ಲೂಕಾಸ್ ಲೋಬೋ ಅವರು ನೂತನ ತೆನೆಗಳನ್ನು ಆಶೀರ್ವದಿಸಿ ಸಾಂಪ್ರದಾಯಿಕ ಕೃಷಿ ಕೊಯಿಲಿನ ಕೃತಜ್ಞತಾ ಪೂಜೆಗೆ ಚಾಲನೆ ನೀಡಿದರು ಹಾಗೂ ಹಬ್ಬದ ದಿವ್ಯಬಲಿದಾನದ ಮುಖ್ಯ ಯಾಜಕರಾಗಿ ಪೂಜೆ ನೆರವೇರಿಸಿದರು.
ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಸಂತ ಜೋಸೆಫ್ ಚಾಪೆಲ್‌ವರೆಗೆ ಭಕ್ತಾದಿಗಳ ವೈಭವದ ಶೋಭಾಯಾತ್ರೆ ಜರುಗಿತು. ಬಂಬಿನಾ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಬಾಲಕಿ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಪುಷ್ಪವೃಷ್ಟಿ ಗೆರೆಯುವ ಮೂಲಕ ತಮ್ಮ ಭಕ್ತಿ ಗೌರವಗಳನ್ನು ಸಮರ್ಪಿಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ. ಡಾ. ಮೈಕಲ್ ಸಂತುಮಾಯೋರ್ ಹಬ್ಬದ ಪ್ರವಚನ ನೀಡಿದರು. ಕನ್ಯಾ ಮರಿಯಮ್ಮನವರು ನಮ್ಮ ನಿತ್ಯ ಮಾತೆ, ಕುಟುಂಬಗಳಲ್ಲಿ ಸಾಮರಸ್ಯ ಹಾಗೂ ಏಕತೆಯ ಅಗತ್ಯತೆ ಮತ್ತು ಹೆಣ್ಣು ಮಗುವನ್ನು ಗುರುತಿಸಿ, ರಕ್ಷಿಸಿ, ಸಶಕ್ತಗೊಳಿಸುವ ಸಾಮಾಜಿಕ ಜವಾಬ್ದಾರಿಯ ಕುರಿತು ಅವರು ಅರ್ಥಪೂರ್ಣ ಸಂದೇಶ ನೀಡಿದರು.
ದಿವ್ಯಬಲಿದಾನ ಪೂಜೆಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂ. ಫಾ. ಜಾರ್ಜ್ ಜೀವನ್ ಸಿಕ್ವೇರಾ ಹಾಗೂ ಸಹ ಆಡಳಿತಾಧಿಕಾರಿ ವಂ. ಫಾ. ವಿಲಿಯಂ ಡಿಸೋಜ ಸಹ-ಯಾಜಕರಾಗಿ ಭಾಗವಹಿಸಿದ್ದರು.
ಪೂಜೆಯ ನಂತರ ನೂತನ ಸಮೃದ್ಧಿಯ ಸಂಕೇತವಾದ ಆಶೀರ್ವದಿಸಿದ ತೆನೆಗಳನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಕೃತಜ್ಞತೆ ಮತ್ತು ಪ್ರೀತಿಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವ ಸಂಪ್ರದಾಯದಂತೆ, ಪ್ರತಿಯೊಬ್ಬರಿಗೂ ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ ಹಬ್ಬದ ಆಚರಣೆಯು ಸೌಹಾರ್ದಯುತವಾಗಿ ಮುಕ್ತಾಯಗೊಂಡಿತು.