image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ.ಕ. ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ: ಶೇ. 25 ಬೋನಸ್, ಶೇ. 14 ಡಿವಿಡೆಂಡ್ ಘೋಷಣೆ

ದ.ಕ. ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ: ಶೇ. 25 ಬೋನಸ್, ಶೇ. 14 ಡಿವಿಡೆಂಡ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (DKMUL) 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷ ರವಿರಾಜ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕುಲಶೇಖರದ ಕೋರ್ಡೆಲ್ ಹಾಲ್‌ನಲ್ಲಿ ಬುಧವಾರ ನಡೆಯಿತು. ವರದಿ ಸಾಲಿನಲ್ಲಿ ಒಕ್ಕೂಟವು ಒಟ್ಟು ₹1,270.53 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ₹10.61 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಸಂಸ್ಥೆಯು ಶೇ. 8.25 ರಷ್ಟು ಪ್ರಗತಿ ಸಾಧಿಸಿದ್ದು, ಹಾಲು ಉತ್ಪಾದಕರಿಗೆ ಶೇ. 25 ಬೋನಸ್ ಹಾಗೂ ಶೇ. 14 ಡಿವಿಡೆಂಡ್ (ಒಟ್ಟು ₹2,91,38,242) ಘೋಷಿಸಲಾಗಿದೆ.

ಹಾಲು ಉತ್ಪಾದಕರಿಗೆ ಖರೀದಿಯ ವಿಶೇಷ ಪ್ರೋತ್ಸಾಹಧನವಾಗಿ ₹23.89 ಕೋಟಿ ಹಾಗೂ ವಿವಿಧ ಅನುದಾನಗಳ ರೂಪದಲ್ಲಿ ₹11.55 ಕೋಟಿ ಸೇರಿದಂತೆ ಒಟ್ಟು ₹35.44 ಕೋಟಿ ನೀಡಿರುವುದಾಗಿ ಅಧ್ಯಕ್ಷರು ತಿಳಿಸಿದರು. ಸಂಘಗಳ ಸಿಬ್ಬಂದಿಗೆ ಗುಣಮಟ್ಟ ಪ್ರೋತ್ಸಾಹಧನವಾಗಿ ₹221.41 ಲಕ್ಷ ವಿತರಿಸಲಾಗಿದ್ದು, ರೈತ ಕಲ್ಯಾಣ ಟ್ರಸ್ಟ್ ಮೂಲಕ ರೈತರ ಮರಣ, ರಾಸುಗಳ ಮರಣ, ವೈದ್ಯಕೀಯ ವೆಚ್ಚ, ಹಟ್ಟಿ ಹಾನಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ₹1.25 ಕೋಟಿ ಪ್ರೋತ್ಸಾಹಧನ ನೀಡಲಾಗಿದೆ. ಹಸಿರು ಮೇವಿನ ಅಭಾವ ನೀಗಿಸಲು ಒಕ್ಕೂಟದಿಂದ ನಿಗದಿತ ದರದಲ್ಲಿ ರಸಮೇವು ಪೂರೈಕೆ ಮಾಡಲಾಗುತ್ತಿದೆ.

ಸಭೆಯಲ್ಲಿ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಒಕ್ಕೂಟ ಮಟ್ಟದ ಅತ್ಯುತ್ತಮ ಸಂಘವಾಗಿ ಉಡುಪಿಯ ಹಾಳೆಕಟ್ಟೆ ಸಂಘ, ಜಿಲ್ಲಾವಾರು ಉತ್ತಮ ಸಂಘಗಳಾಗಿ ಕಡಂದಲೆ ಹಾಗೂ ಬೆಳಪು ಸಂಘಗಳು ಆಯ್ಕೆಯಾದವು. ಉತ್ತಮ ಮಹಿಳಾ ಸಂಘಗಳಾಗಿ ಬಂದಾರು ಮತ್ತು ಆರೂರು, ಉತ್ತಮ ಬಿಎಂಸಿಗಳಾಗಿ ನೆರಿಯ ಹಾಗೂ ಮೇಕೋಡು ಮತ್ತು ಉತ್ತಮ ಹೈನುಗಾರರಾಗಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಮೀಲ ಹಾಗೂ ಡಾ. ದೇವಿಪ್ರಸಾದ್ ಶೆಟ್ಟಿ ಗೌರವಕ್ಕೆ ಪಾತ್ರರಾದರು. ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ ಉಡುಪ ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ