image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳಿಗೆ ಕೋಡ್‌ಕ್ರಾಫ್ಟ್‌ ಸಂಸ್ಥೆಯಿಂದ ₹6.28 ಲಕ್ಷ ಸಿಎಸ್‌ಆರ್‌ ನೆರವು

ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳಿಗೆ ಕೋಡ್‌ಕ್ರಾಫ್ಟ್‌ ಸಂಸ್ಥೆಯಿಂದ ₹6.28 ಲಕ್ಷ ಸಿಎಸ್‌ಆರ್‌ ನೆರವು

ಮೂಡುಬಿದಿರೆ: ಶಿಕ್ಷಣದ ಜತೆಗೆ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಆಳ್ವಾಸ್‌ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಉಪಕ್ರಮದಡಿ ₹6.28 ಲಕ್ಷ ಆರ್ಥಿಕ ನೆರವು ನೀಡಿದೆ. ಆಳ್ವಾಸ್‌ನ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 628 ವಿದ್ಯಾರ್ಥಿಗಳಿಗೆ ತಲಾ ₹1,000ರಂತೆ ಒಟ್ಟು ₹6,28,000 ನೆರವನ್ನು ವಿತರಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ನೆರವಿನ ಮೊತ್ತವನ್ನು ಹಸ್ತಾಂತರಿಸಲಾಯಿತು.

ಆಳ್ವಾಸ್ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಿಎಸ್ಆರ್ ಉಪಕ್ರಮವನ್ನು ಶ್ಲಾಘಿಸಿದರು. ಸಮಾಜದಲ್ಲಿ ಸಂಪತ್ತು ಹೊಂದಿರುವವರು ತಮ್ಮ ಆದಾಯದ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದಿನ ಕಾಲದಲ್ಲಿದ್ದ ಗುರು–ಶಿಷ್ಯ ಪರಂಪರೆ ಇಂದು ನಿಧಾನವಾಗಿ ಮರೆಯಾಗುತ್ತಿದ್ದು, ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಕಲೆಯು ಜಾತಿ, ಧರ್ಮ, ಲಿಂಗ ಅಥವಾ ಯಾವುದೇ ಭೇದವನ್ನು ಮೀರಿ ಮಾನವೀಯತೆಯನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ. ಜೀವನದೊಂದಿಗೆ ಜನಪದ ಕಲೆಗಳು ಬೆರೆತಾಗ ಜನರಲ್ಲಿ ಸೃಜನಶೀಲತೆ ಹೆಚ್ಚುತ್ತದೆ. ಇದೇ ರೀತಿಯಲ್ಲಿ ಕಲೆಗಳನ್ನು ಮುಂದುವರಿಸಿಕೊಂಡು ಹೋದರೆ ಭಾರತದಲ್ಲಿ ಜನಪದ ಹಾಗೂ ಸಾಂಪ್ರದಾಯಿಕ ಕಲೆಗಳಿಗೆ ಉಜ್ವಲ ಭವಿಷ್ಯವಿದೆ. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಅಭಿವ್ಯಕ್ತಿಯನ್ನು ಅನಾವರಣಗೊಳಿಸುವ ವೇದಿಕೆಯಾಗಿದ್ದು, ದೇಶದ ವಿವಿಧ ಸಂಸ್ಕೃತಿಗಳನ್ನು ಅರಿಯುವ ಅವಕಾಶವನ್ನೂ ಒದಗಿಸುತ್ತವೆ. ವಿದ್ಯಾರ್ಥಿಗಳು ಇಂದು ಅನುಭವಿಸುತ್ತಿರುವ ಪರಿಶ್ರಮ ಮತ್ತು ಶಿಸ್ತು ಅವರ ಮುಂದಿನ ಸಾಧನೆಗೆ ಬುನಾದಿಯಾಗಲಿದೆ ಎಂದು ಡಾ. ಮೋಹನ ಆಳ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸಿನ ಅವಕಾಶಗಳು ಒಮ್ಮೆ ಎದುರಾಗುತ್ತವೆ, ಅಂತಹ ಸಂದರ್ಭದಲ್ಲಿ ತಮ್ಮ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಕೆಲವೊಮ್ಮೆ ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ನಿರಾಶರಾಗದೆ ಮತ್ತಷ್ಟು ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಾಂಸ್ಕೃತಿಕ ವಿದ್ಯಾರ್ಥಿಗಳಿಗೆ ಸಿಎಸ್ಆರ್ ನೆರವು ನೀಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಿಇಒ ದೀಕ್ಷಿತ್ ರೈ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯಾಚರಣೆಗಳ ಮುಖ್ಯಸ್ಥ ಜೋಬಿನ್ ಜೋಸೆಫ್ ಹಾಗೂ ಆಳ್ವಾಸ್‌ನ ಉದ್ಯಮಶೀಲತೆ ಅಭಿವೃದ್ಧಿ ಘಟಕದ ಮುಖ್ಯಸ್ಥ ವೇಣು ರಾವ್ ದೇವಾ ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ