ಮಂಗಳೂರು: ಅಕ್ಷರ ಕಲಿಯುವುದು ಮಾತ್ರವಲ್ಲದೆ, ಆ ಜ್ಞಾನವನ್ನು ದೈನಂದಿನ ಜೀವನದಲ್ಲಿ ನಿರಂತರವಾಗಿ ಬಳಸಿಕೊಂಡು ಸುಸ್ಥಿರಗೊಳಿಸಿದಾಗ ಮಾತ್ರ ಸಾಕ್ಷರತೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ತಿಳಿಸಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ನಿರ್ದೇಶನಾಲಯ, ದ.ಕ. ಜಿಲ್ಲಾ ಪಂಚಾಯತ್, ಡಯಟ್ ಮಂಗಳೂರು, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಜನ ಶಿಕ್ಷಣ ಟ್ರಸ್ಟ್ ಮತ್ತು ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 60 ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವು ತಾರ್ಕಿಕ ಆಲೋಚನೆಗೆ ಮೂಲವಾಗಿದ್ದು, ವ್ಯಕ್ತಿಯ ಬದುಕಿಗೆ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪಾರ ಜ್ಞಾನ ಮತ್ತು ಶಿಕ್ಷಣದ ಬಲವೇ ಅವರ ಹೆಸರನ್ನು ಅಜರಾಮರಗೊಳಿಸಿದೆ. ಅವರು ಕಲಿತ ಅಕ್ಷರಗಳು ಸಮಾಜದ ದಿಕ್ಕನ್ನೇ ಬದಲಾಯಿಸಿದವು. ಪ್ರತಿಯೊಬ್ಬರೂ ಸಾಕ್ಷರರಾಗುವುದರ ಜೊತೆಗೆ, ತಾವು ಪಡೆದ ಜ್ಞಾನದ ಬೆಳಕನ್ನು ಇತರರೊಂದಿಗೆ ಹಂಚಿಕೊಂಡು ಸುಸ್ಥಿರ ಸಾಕ್ಷರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಯಟ್ ಉಪನಿರ್ದೇಶಕ ಸದಾನಂದ ಪೂಂಜಾ ವಹಿಸಿದ್ದರು. ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಶಶಿಧರ್ ಜಿ.ಎಸ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಜ್ಞಾನೇಶ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ ಮಾಜಿ ಜಿಲ್ಲಾ ಸಂಯೋಜಕ ಶೀನ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾಬಿ ಟಿ.ಐ ಕಾರ್ಯಕ್ರಮದ ಆರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು.