ಮಂಗಳೂರು : ಕರಾವಳಿ ಜಿಲ್ಲೆಗಳ ಮೂಲ ನಿವಾಸಿಗಳೆಂದು ಗುರುತಿಸಿಕೊಂಡಿರುವ ಕೊರಗ ಸಮುದಾಯದವರು ತಮ್ಮ ಭೂಮಿ ಹಕ್ಕು ಹಾಗೂ ಶಾಶ್ವತ ಪರಿಹಾರಕ್ಕಾಗಿ ಮಂಗಳೂರಿನಲ್ಲಿ ಮೌನ ಜಾಥಾ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ನೇತೃತ್ವದಲ್ಲಿ ನಗರದ ಪಡೀಲ್ ವೃತ್ತದಿಂದ ಪ್ರಜಾಸೌಧದ ಬಾಗಿಲವರೆಗೆ ನೂರಾರು ಮಂದಿ ಬ್ಯಾನರ್ ಹಿಡಿದು ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬರುವ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಯೊಂದಿಗೆ ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸೂಕ್ತ ನಿಯಮಗಳನ್ನು ರೂಪಿಸಿ ಶಾಶ್ವತ ಪರಿಹಾರ ಒದಗಿಸಬೇಕು. 1994 ರಲ್ಲಿ ಸಲ್ಲಿಕೆಯಾದ ಡಾ. ಮುಹಮ್ಮದ್ ಫೀರ್ ವರದಿಯ ಶಿಫಾರಸಿನಂತೆ ಪ್ರತಿ ಕೊರಗ ಕುಟುಂಬಕ್ಕೆ ಕನಿಷ್ಠ 2.5 ಎಕರೆ ಕೃಷಿ ಯೋಗ್ಯ ಭೂಮಿ ವಿತರಿಸಿ, ಏಕಕಾಲದಲ್ಲಿ ಪುನರ್ವಸತಿ ಕಲ್ಪಿಸಬೇಕು ಹಾಗೂ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದರೊಂದಿಗೆ, ಶಿಕ್ಷಣ ಪಡೆದಿದ್ದರೂ ಉದ್ಯೋಗ ಅಭದ್ರತೆಯಿಂದ ಭವಿಷ್ಯದ ಜೀವನದಲ್ಲಿ ಭರವಸೆ ಕಳೆದುಕೊಳ್ಳುತ್ತಿರುವ ಕೊರಗ ಯುವಜನತೆಗಾಗಿ ಸರ್ಕಾರ ಘೋಷಿಸಿದ್ದ ಶೇಕಡಾ 100 ರಷ್ಟು ನೇರ ನೇಮಕಾತಿಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ. ಅಲ್ಲದೆ, ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ನರಳುತ್ತಿರುವ ಸಮುದಾಯಕ್ಕೆ ಸರ್ಕಾರ ನೀಡುತ್ತಿದ್ದ ಉಚಿತ ಪೌಷ್ಟಿಕ ಆಹಾರ ಯೋಜನೆಯ ಅವಧಿಯನ್ನು 6 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಲಾಗಿದ್ದರೂ, ಕಳೆದ 6 ತಿಂಗಳಿಂದ ಬಾಕಿ ಉಳಿದಿರುವ ಪೌಷ್ಟಿಕ ಆಹಾರವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಈ ಮನವಿ ಸಲ್ಲಿಕೆಯ ಸಂದರ್ಭದಲ್ಲಿ ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಸುಂದರ ಕೊರಗ, ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಬಾಬು ಪಾಂಗಳ, ದ.ಕ. ಜಿಲ್ಲಾ ಸಂಘದ ಕಾರ್ಯದರ್ಶಿ ಶಶಿಕಲಾ ಕೋಡಿಕಲ್, ಉಪಾಧ್ಯಕ್ಷ ಕೊಗ್ಗು ರಮೇಶ್, ಬೆಳ್ತಂಗಡಿ ತಾಲೂಕು ಘಟಕದ ಸಂತೋಷ್, ಸುಳ್ಯದ ರಾಮಚಂದ್ರ, ಉಳ್ಳಾಲದ ಕಮಲ, ಪುತ್ತೂರಿನ ಕುಂಬ್ರ ಬಾಬು, ಕಮಲ ಉಪ್ಪಿನಂಗಡಿ, ಬಂಟವಾಳದ ಮಾಂಕು ಪಚ್ಚನಡ್ಕ, ಕಾರ್ಕಳ ತಾಲೂಕು ಘಟಕದ ಕುಡುಪ ಸಬಚರಿಪೇಟೆ ಹಾಗೂ ಮಂಗಳೂರು ನಗರ ವಲಯ ಘಟಕದ ಬೇಬಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.