image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್ ನುಡಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್ ನುಡಿ

ಮಂಗಳೂರು: ದೇಶದ ಅಭಿವೃದ್ಧಿಗೆ ಪರಿಸರದ ಅಗತ್ಯವೂ ಇದೆ ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರವಾದಿಗಳಿಗೆ ಮಾತ್ರ ಪರಿಸರದ ಬಗ್ಗೆ ಕಾಳಜಿ ಇದೆ ಎಂಬ ಭಾವನೆ ಬೇಡ, ಪರಿಸರ ಕಾಳಜಿಯು ನಮಗೂ ಇದೆ ಎಂದು ರಾಜ್ಯದ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದ ಪುರಭವನದಲ್ಲಿ ರವಿವಾರ ನಡೆದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಉಳಿಸಲು ಉದ್ಯಮಿಗಳು ಕೂಡ ಆಸಕ್ತರಾಗಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಸರ ನಿಯಂತ್ರಣ ಮಂಡಳಿಯ ಒಪ್ಪಿಗೆ ಪಡೆದೇ ಅನುಮೋದನೆ ನೀಡಲಾಗುತ್ತದೆ. ಜಗತ್ತಿನ ಅಭಿವೃದ್ಧಿಯ ವಿಚಾರವಾಗಿ ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಯುವಜನತೆಯ ಮನಸ್ಸನ್ನು ಅರಿಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಜೊತೆ ಮುಕ್ತ ಮಾತುಕತೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, "ಜಿಲ್ಲೆಯಲ್ಲಿ ಎಂಆರ್‌ಪಿಎಲ್ ಹಾಗೂ ಕ್ರೊಜೆಂಟಿಕ್ಸ್ ಉದ್ಯಮ ಸ್ಥಾಪನೆ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ತಾನು ಅವುಗಳ ವಿರುದ್ಧ ಭಾರಿ ಹೋರಾಟ ಮಾಡಿದ್ದೆ. ಆದರೆ ಅದರಿಂದ ಉದ್ಯೋಗ ಕಡಿತ ಹಾಗೂ ಆರ್ಥಿಕ ನಷ್ಟವಾಗಿದೆ ಎಂಬುದನ್ನು ತಿಳಿದಾಗ ನನ್ನ ಹೋರಾಟದ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ. ಅಂದು ನಮಗೆ ಸೂಕ್ತ ಮಾರ್ಗದರ್ಶನದ ಕೊರತೆಯಿತ್ತು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಂತಹ ಸಂಸ್ಥೆಗಳು ಅಂದು ಇದ್ದಿದ್ದರೆ ನಾವು ಬೃಹತ್ ಉದ್ಯಮಗಳ ವಿರುದ್ಧ ಪ್ರತಿಭಟಿಸುತ್ತಿರಲಿಲ್ಲವೇನೋ" ಎಂದು ಹೇಳಿದರು. ಉದಾಹರಣೆಗೆ ಉಳ್ಳಾಲ ತಾಲೂಕಿನ ದೇರಳಕಟ್ಟೆ ಪರಿಸರದಲ್ಲಿ ಹೊರಗಿನ ಉದ್ಯಮಿಗಳ ಪಾಲ್ಗೊಳ್ಳುವಿಕೆಯಿಂದಾಗಿ ನಾಲ್ಕು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಬಂದು ಸಾವಿರಾರು ಮಂದಿಗೆ ಉದ್ಯೋಗ, ವ್ಯಾಪಾರ ವೃದ್ಧಿ ಹಾಗೂ ಭೂಮಿಯ ಮಾರುಕಟ್ಟೆ ಬೆಲೆ ದ್ವಿಗುಣಗೊಂಡಿರುವುದನ್ನು ಅವರು ಉಲ್ಲೇಖಿಸಿದರು.

ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮಾತನಾಡಿ, ನಾಗಾರ್ಜುನ ವಿದ್ಯುತ್ ಕಂಪನಿಯು ಉತ್ಪಾದಿಸುವ ಶೇ. 50ರಷ್ಟು ವಿದ್ಯುತ್ ಬೆಂಗಳೂರಿಗೆ ಸರಬರಾಜಾಗುತ್ತಿದ್ದು, ಕರಾವಳಿಯಲ್ಲಿ ವಿದ್ಯುತ್ ಕೊರತೆಯಿದೆ. ಹಾಗಾಗಿ ಇಲ್ಲಿ ದಿನದ 24 ಗಂಟೆಯೂ ವಿದ್ಯುತ್ ಲಭಿಸುವಂತೆ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ತೋನ್ಸೆ ನಿತ್ಯಾನಂದ ಡಿ. ಕೋಟ್ಯಾನ್ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ, ಕರಾವಳಿ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡೀಸ್, ಮುಂಡೂರು ಸುರೇಂದ್ರ ಸಾಲ್ಯಾನ್, ಸದಾನಂದ ಎನ್. ಆಚಾರ್ಯ, ಡಾ. ಆರ್.ಕೆ. ಶೆಟ್ಟಿ, ಪಿ. ಧನಂಜಯ ಶೆಟ್ಟಿ, ಅಡ್ವಕೇಟ್ ಆರ್.ಎಂ. ಭಂಡಾರಿ, ಸಿ.ಎ. ಐಆರ್ ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ಹಾಗೂ ದಯಾ ಸಾಗರ ಚೌಟ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ