ಮಂಗಳೂರು : ಮಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಸಮುದಾಯಕ್ಕಾಗಿ ಜಿಲ್ಲೆಯಲ್ಲಿ ಮೀಸಲಿಟ್ಟಿರುವ ಡಿಸಿ ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಂಡು, ತಿಂಗಳೊಳಗೆ ಹಂಚಿಕೆಗೆ ಕ್ರಮ ವಹಿಸಬೇಕು; ಇಲ್ಲವಾದಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ. ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್ ಮಾತನಾಡಿ, ಡಿಸಿ ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿ ಜಿಲ್ಲಾಡಳಿತ 2017ರಲ್ಲೇ ಸರ್ಕಾರಕ್ಕೆ ಡ್ರಾಫ್ಟ್ ರೂಲ್ಸ್ ಕಳುಹಿಸಿದ್ದರೂ ಭೂ ಮಂಜೂರಾತಿ ನಿಯಮಾವಳಿಗೆ ತಿದ್ದುಪಡಿ ತಂದು ಭೂಮಿ ಹಂಚಿಕೆ ಮಾಡಲು ಇದುವರೆಗೆ ಗಮನ ಹರಿಸಲಾಗಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಮಟ್ಟದ ಸಭೆಗಳಲ್ಲಿ ಸಂಘಟನೆಗಳು ಒತ್ತಾಯಿಸುತ್ತಾ ಬಂದಿದ್ದರೂ, ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಸಮಿತಿಯ ಉಪ ಪ್ರಧಾನ ಸಂಚಾಲಕ ರಘು ಕೆ. ಎಕ್ಕಾರು ಮಾತನಾಡಿ, ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, 2023ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಈ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದರು.
ಸಂಘಟನೆಯು ಸರ್ಕಾರದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಇರಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಅರ್ಜಿದಾರ ಕುಟುಂಬಗಳಿಗೆ ಕೃಷಿ ಚಟುವಟಿಕೆಗೆ ತಲಾ 2 ಎಕರೆ ಭೂಮಿ ಹಾಗೂ ನಗರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಕನಿಷ್ಠ 10 ಸೆಂಟ್ಸ್ ಜಮೀನು ಒದಗಿಸಬೇಕು ಮತ್ತು ಮುಂದಿನ ಆರು ತಿಂಗಳೊಳಗೆ ಅರ್ಹ ಫಲಾನುಭವಿಗಳಿಗೆ ಡಿಸಿ ಮನ್ನಾ ಭೂಮಿ ಮಂಜೂರು ಮಾಡಬೇಕು. ಡಿಸಿ ಮನ್ನಾ ಭೂಮಿಯ ಒತ್ತುವರಿಯನ್ನು ತೆರವುಗೊಳಿಸಲು ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರನ್ನು ಒಳಗೊಂಡ ಕ್ರಿಯಾ ಪಡೆ ಸಮಿತಿ ರಚಿಸಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಮತ್ತು ದಲಿತ ಮುಖಂಡರ ಪ್ರತ್ಯೇಕ ಸಭೆ ಕರೆಯಬೇಕು. 2017ರ ಕಂದಾಯ ಅಧಿಕಾರಿಗಳ ಸರ್ವೇ ವರದಿಯಲ್ಲಿ ತಪ್ಪುಗಳಿದ್ದು, ಅಡಂಗಲ್ ಪ್ರಕಾರ ಮತ್ತೊಮ್ಮೆ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು. 2024ರಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೊರಡಿಸಿದ ಆದೇಶವನ್ನು ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸುವುದು, ಸರ್ಕಾರಿ ಭೂ ಲಭ್ಯತಾ ಪಟ್ಟಿ ಸಿದ್ಧಪಡಿಸಿ ಪರಿಶಿಷ್ಟ ಸಮುದಾಯಕ್ಕೆ ಶೇ. 50ರಷ್ಟು ಭೂಮಿ ಕಾಯ್ದಿರಿಸುವುದು ಹಾಗೂ ನಗರ ಪಾಲಿಕೆ, ನಗರ ಸಭೆ, ಪ.ಪಂ. ವ್ಯಾಪ್ತಿಯಲ್ಲಿ ಭೂ ಮಂಜೂರಾತಿಗೆ ವಿಧಿಸಿರುವ ಮಾನದಂಡ ರದ್ದುಗೊಳಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಲಾಯಿತು.
ಅಲ್ಲದೆ, ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ವೃತ್ತಗಳು ನಿರ್ಮಾಣವಾಗಿದ್ದರೂ ಕಳೆದ ಹಲವು ವರ್ಷಗಳಿಂದ ದಲಿತರು ಒತ್ತಾಯಿಸುತ್ತಿರುವ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂದು ಮುಖಂಡರಾದ ಎಸ್.ಪಿ. ಆನಂದ ಹಾಗೂ ಜಗದೀಶ್ ಪಾಂಡೇಶ್ವರ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಶಿಲಾನ್ಯಾಸ ನಡೆದಿದ್ದರೂ ಸಂಚಾರ ಸಮಸ್ಯೆಯ ಸಬೂಬು ಹೇಳಿ ವಂಚಿಸಲಾಗುತ್ತಿದ್ದು, ಸಂಚಾರ ವ್ಯವಸ್ಥೆಗೆ ಅಡಚಣೆಯಾಗದ ರೀತಿಯಲ್ಲಿ ಒಂದು ತಿಂಗಳೊಳಗೆ ಅಂಬೇಡ್ಕರ್ ವೃತ್ತ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಆನಂದ ಬೆಳ್ಳಾರೆ, ಚಂದ್ರಕುಮಾರ್, ಗಿರೀಶ್ ಕುಮಾರ್ ಯು.ಕೆ., ಕೃಷ್ಣಾನಂದ ಡಿ., ಸರೋಜಿನಿ ಬಂಟವಾಳ, ಸದಾಶಿವ ಪಡುಬಿದ್ರಿ, ಸೇಸಪ್ಪ ಬೆದ್ರಕಾಡು, ದಿನೇಶ್ ಮೂಳೂರು, ಸಂಜೀವ ಆರ್. ಬೆಳತಂಗಡಿ, ಚೆನ್ನಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದರು.