ಮಂಗಳೂರು: ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯ ಸಾಹಿತಿ ಪಂಜೆ ಮಂಗೇಶರಾಯರು ನೂರು ವರ್ಷಗಳ ಹಿಂದೆಯೇ 'ಕೋಟಿ ಚೆನ್ನಯ' ಕಥೆಯನ್ನು ಆಧುನಿಕ ಪರಿಭಾಷೆಯ ಕಥನವನ್ನಾಗಿ ಬರೆದ ಪ್ರಥಮ ಲೇಖಕರು ಎಂದು ತಂತ್ರಜ್ಞಾನಿ ಹಾಗೂ ತತ್ವಜ್ಞಾನಿ ಕೆ. ಪಿ. ರಾವ್ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಥಿಯೇಟರ್ ಯಕ್ಷ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಿದ್ದ ಯಕ್ಷಗಾನ ಸಾಧಕರ ಸಂಸ್ಮರಣೆ ಮತ್ತು ತುಳುತಿಟ್ಟಿನ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಂಜೆ ಮಂಗೇಶರಾಯರ ‘ಕೋಟಿ ಚೆನ್ನಯ’ ಕತೆಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಪ್ರಸ್ತುತ ಪಂಜೆಯವರ ಈ ಕತೆಗೆ ನೂರು ವರ್ಷ ತುಂಬುತ್ತಿದ್ದು, ಆಧುನಿಕ ಮನೋಧರ್ಮಕ್ಕೆ ಅನುಗುಣವಾಗಿ ಕಥನವನ್ನು ಮರುನಿರೂಪಿಸಿದ ಕೌಶಲ್ಯವನ್ನು ಇದರಲ್ಲಿ ಕಾಣಬಹುದು. ಪಂಜೆಯವರು ತಮ್ಮ ಊರಾದ ಕಿನ್ನಿಕಂಬಳದಲ್ಲಿ ಈ ಕತೆ ಬರೆಯಲು ಪ್ರೇರಣೆ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಯಕ್ಷಗಾನಾಚಾರ್ಯ ತೋನ್ಸೆ ಕಾಂತಪ್ಪ ಮಾಸ್ತರ್ ಮತ್ತು ಯಕ್ಷಗಾನ ಕವಿವರ ಮಧು ಕುಮಾರ್ ನಿಸರ್ಗ ಅವರ ಬಗ್ಗೆ ಸಂಸ್ಮರಣಾ ಮಾತುಗಳನ್ನಾಡಿದರು. ಮಧು ಕುಮಾರ್ ಅವರು ಶ್ರೇಷ್ಠ ಯಕ್ಷಗಾನ ಪ್ರಸಂಗಕರ್ತರಲ್ಲಿ ಒಬ್ಬರಾಗಿದ್ದು, ತಮ್ಮ ಮನೆತನದ ಯಕ್ಷಗಾನ ಪರಂಪರೆಯನ್ನು ಮುಂದುವರಿಸಿದ ಕಲೋಪಾಸಕರಾಗಿದ್ದರು. ಹಾಗೆಯೇ ತೋನ್ಸೆ ಕಾಂತಪ್ಪ ಮಾಸ್ತರ್ ಅವರು ಉಡುಪಿ ಮತ್ತು ಬ್ರಹ್ಮಾವರ ಪರಿಸರದಲ್ಲಿ ಯಕ್ಷಗಾನ ಆಸಕ್ತಿಯನ್ನು ಪಸರಿಸಿದ ನಿಸ್ವಾರ್ಥ ಶಿಕ್ಷಕರಾಗಿದ್ದರು ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಹಿರಿಯ ಪಾಡ್ದನ ಪರಿಣಿತರಾದ ರುಕ್ಕು ಕರಿಯಂಗಳ ಅವರು ಕೋಟಿ ಚೆನ್ನಯ್ಯ ಪಾಡ್ದನವನ್ನು ಪ್ರಸ್ತುತಪಡಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿದ್ದರು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ ಕುಮಾರ್ ಸ್ವಾಗತಿಸಿದರೆ, ಕಲಾವಿದ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿ, ಸ್ಕಂದ ಕೊನ್ನಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪೃಥ್ವಿರಾಜ ಕವತ್ತಾರು ನಿರ್ದೇಶನದಲ್ಲಿ ತುಳುತಿಟ್ಟಿನ ಪೂರ್ವರಂಗ ಸಹಿತ ‘ಕೋಟಿ ಚೆನ್ನಯ’ ಯಕ್ಷಗಾನ ಪ್ರದರ್ಶನ ಜರುಗಿತು.