ಉಜಿರೆ : ಸ್ಥಳೀಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಸೆಪ್ಟೆಂಬರ್ 10 ಮತ್ತು 11 ರಂದು (ಗುರುವಾರ ಮತ್ತು ಶುಕ್ರವಾರ) ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ “ಎಸ್.ಡಿ.ಎಂ. ಆರೋಹಂ” ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ತಿಳಿಸಿದ್ದಾರೆ. ಸೋಮವಾರ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವದಲ್ಲಿ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಟ್ಟು 23 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಬೆಂಗಳೂರು ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಉದ್ಘಾಟಿಸಲಿದ್ದಾರೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡಲಿದ್ದು, ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಸೆಪ್ಟೆಂಬರ್ 11 ರಂದು ಶುಕ್ರವಾರ ಸಂಜೆ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ವಿಜೇತರಿಗೆ ನಗದು ಬಹುಮಾನ ವಿತರಿಸಲಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಪ್ರತಿ ಪದವಿಪೂರ್ವ ಕಾಲೇಜಿನಿಂದ 62 ಹಾಗೂ ಪದವಿ ಕಾಲೇಜಿನಿಂದ 19 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಎಲ್ಲಾ ಸ್ಪರ್ಧಿಗಳಿಗೆ ಎರಡು ದಿನ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸೆ. 10 ರಂದು ಸಂಜೆ 6 ಗಂಟೆಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಂದ ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಯಿಂದ 'ಟೀಂ ಕಂಬೋಜಿ ಮ್ಯೂಸಿಕ್' ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸುದ್ದಿಗೋಷ್ಠಿಯಲ್ಲಿ ಉಪಪ್ರಾಂಶುಪಾಲರಾದ ಪ್ರೊ. ನಂದಕುಮಾರಿ, ಆರೋಹಂ ಸಂಘಟಕರಾದ ಗಣೇಶ್ ನಾಯಕ್, ಡಾ. ಶ್ರೀಧರ ಭಟ್ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುನಿಲ್ ಹೆಗ್ಡೆ ಉಪಸ್ಥಿತರಿದ್ದರು.