ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನದ 30ನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಕುಶಲ್ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ನಗರದ ಎ.ಜೆ. ಗ್ರ್ಯಾಂಡ್ ಸಭಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್‌ನ ಅಧ್ಯಕ್ಷ, ಉದ್ಯಮಿ ಪಾದೆ ಅಜಿತ್ ರೈ ಅವರಿಗೆ ವಿಶ್ವ ಬಂಟ ಪ್ರತಿಷ್ಠಾನದ ಪ್ರತಿಷ್ಠಿತ "ಎಮಿನೆಂಟ್ ಬಂಟ್ ಪರ್ಸನಾಲಿಟಿ" ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೂ ದತ್ತಿನಿಧಿ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಹಿರಿಯ ಯಕ್ಷಗಾನ ಕಲಾವಿದ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರಿಗೆ ಡಾ. ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್ ಸಾಧಿಸಿದ ಆದಿತ್ಯ ಪೆರ್ಗಡೆ ಅವರಿಗೆ ದಿ. ಸಿಎ ವೈ.ಆರ್. ಶೆಟ್ಟಿ ದತ್ತಿನಿಧಿ ಪ್ರಶಸ್ತಿ, ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುನೀತ್ ಶೆಟ್ಟಿ ಅವರಿಗೆ ಸಿಎ ಗೋಪಾಲ್ ಬಿ. ಶೆಟ್ಟಿ ದತ್ತಿನಿಧಿ ಪ್ರಶಸ್ತಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಸಾಧಮ್ಮ ಶೆಟ್ಟಿ ಅವರಿಗೆ ದಿ. ಎಣ್ಮಕಜೆ ಕಲಾವತಿ ಶೆಟ್ಟಿ ದತ್ತಿನಿಧಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ವಿಶ್ವ ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಬಿ. ಸಚ್ಚಿದಾನಂದ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.