ಮಂಗಳೂರು: ಸಂಗೀತವು ಸೃಷ್ಟಿಯ ಆದಿಯಿಂದಲೂ ಮಾನವಕುಲದ ಜೊತೆಯಾಗಿ ಬಂದಿದ್ದು, ಸಂಗೀತದ ಮೂಲಕ ದೈವಿಕ ಆನಂದ ಹಾಗೂ ದೈಹಿಕ ಮತ್ತು ಮಾನಸಿಕ ಶಾಂತಿ ಹೊಂದಲು ಸಾಧ್ಯ ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮನಂದ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಕೂಡ ಸ್ವತಃ ಸಂಗೀತದ ಅಭ್ಯಾಸ ನಡೆಸಿದ್ದರು ಹಾಗೂ ಸಂಗೀತ ಪ್ರೇಮಿಯಾಗಿದ್ದರು ಎಂದು ಅವರು ಸ್ಮರಿಸಿದರು.
ಕಲಾಸಾಧನ ಸಂಸ್ಥೆಯ ಆಶ್ರಯದಲ್ಲಿ ಹಾಗೂ ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ರವಿವಾರ ನಗರದ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಂಭ್ರಮ 'ರಾಗ ಸುಧಾ' ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ರಾಮಕೃಷ್ಣ ಮಠದ ಪ್ರಶಾಂತ ಪರಿಸರದಲ್ಲಿ ಕಲಾಸಾಧನ ತಂಡವು ಈ ಸಂಗೀತ ಸಂಭ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದ ಅವರು ಶುಭ ಹಾರೈಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಖ್ಯಾತ ಹೃದ್ರೋಗ ತಜ್ಞ ಡಾ. ಮೋಹನ್ ಪೈ, ಎಂಆರ್‌ಪಿಎಲ್ ನಿವೃತ್ತ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಶಕ್ತಿನಗರದ ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಮಂಗಳೂರು ರೋಟರಿ ಸೆಂಟ್ರಲ್‌ನ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ಸ್ವಾಗತಿಸಿದರು. ಶ್ರೀಮತಿ ಸ್ಮಿತಾ ಅವರು ಕಲಾವಿದರ ಪರಿಚಯ ಮಾಡಿಕೊಟ್ಟರು. ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರೆ, ಪಾಂಡುರಂಗ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕಲಾವಿದರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಳಿಕ ಪುಣೆಯ ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಅವರು ನಡೆಸಿಕೊಟ್ಟ ರಸವತ್ತಾದ ಗಾಯನ ಕಾರ್ಯಕ್ರಮವು ಸಂಗೀತ ಪ್ರಿಯರ ಮನಸೆಳೆಯಿತು. ಇವರಿಗೆ ತಬಲಾದಲ್ಲಿ ಬೆಂಗಳೂರಿನ ಅಕ್ಷಯ್ ಜೋಷಿ, ಹಾರ್ಮೋನಿಯಂನಲ್ಲಿ ಯಲ್ಲಾಪುರದ ಸತೀಶ್ ಭಟ್ ಹೆಗ್ಗಾರ್ ಹಾಗೂ ತಾನ್ಪುರದಲ್ಲಿ ಮಂಗಳೂರಿನ ಕಾರ್ತಿಕ್ ಮತ್ತು ಪ್ರದಯ್ ಸಾಥ್ ನೀಡಿದರು.