ಮಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಬಂಟ ಸಮುದಾಯದ ಕೊಡುಗೆ ಅನನ್ಯವಾಗಿದ್ದು, ಇಂತಹ ಕ್ರೀಡೋತ್ಸವಗಳ ಮೂಲಕ ಇನ್ನಷ್ಟು ಹೊಸ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಹಾಗೂ 'ನಮ್ಮ ಟಿವಿ' ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಆಯೋಜಿಸಲಾದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ 'ಬಂಟ ಕ್ರೀಡೋತ್ಸವ-2026' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ಸಮಗ್ರ ಸಮಾಜದ ಒಗ್ಗಟ್ಟು ಮತ್ತು ಭಾವೈಕ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ರಣಜಿ ಕ್ರಿಕೆಟ್ ಆಟಗಾರ ರಕ್ಷಣ್ ರೈ ಅವರು ಕ್ರೀಡಾಪಟುಗಳ ಆಕರ್ಷಕ ಪಥಸಂಚಲನಕ್ಕೆ ಚಾಲನೆ ನೀಡಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯoತಾಯ ಅಡ್ಯಾರುಗುತ್ತು ಹಾಗೂ ಲಾತೂರಿನ ಉದ್ಯಮಿ ದಿವಾಕರ ಶೆಟ್ಟಿ ಶುಭ ಹಾರೈಸಿ, ಸಂಘಟಕರ ಶ್ರಮವನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಆಶಾಜ್ಯೋತಿ ರೈ, ಕೃಷ್ಣಪ್ರಸಾದ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಹಾಗೂ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅನೂಪ್ ಶೆಟ್ಟಿ ಪ್ರಾರ್ಥಿಸಿದರು. ಬಂಟ ಕ್ರೀಡಾಕೂಟದ ಸಂಚಾಲಕ ಜಗದೀಶ್ ಶೆಟ್ಟಿ ಬಿಜೈ ಸ್ವಾಗತಿಸಿ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಧನ್ಯವಾದ ಸಮರ್ಪಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.