ಮಂಗಳೂರು: ಆಗಂತುಕರಿಬ್ಬರು ನಗರದ ತೊಕ್ಕೊಟ್ಟು ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಜಲ್ಲಿಕಲ್ಲುಗಳನ್ನಿಟ್ಟ ಪರಿಣಾಮ ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಕೇಳಿ ಸ್ಥಳೀಯರಿಗೆ ಮನೆಗಳಲ್ಲಿ ಕಂಪನದ ಅನುಭವವಾದ ಘಟನೆ ನಡೆದಿದೆ.
ಶನಿವಾರ ರಾತ್ರಿ 8.05ರ ಸುಮಾರಿಗೆ ಅಲ್ಲೆ ಸಮೀಪದಲ್ಲಿ ಇದ್ದ ಕೊರಗಜ್ಜನ ಅಗೆಲು ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯರಿಬ್ಬರು ರೈಲ್ವೇ ಹಳಿಯಲ್ಲಿ ಆಗಂತುಕರಿಬ್ಬರು ಇದ್ದಿದ್ದನ್ನು ಕಂಡಿದ್ದಾರೆ. ಅಲ್ಲಿಂದ ಮಹಿಳೆಯರು ಮನೆಗೆ ತಲುಪುವಷ್ಟರಲ್ಲಿ ಕೇರಳದ ಕಡೆಗೆ ಹೋಗುವ ರೈಲೊಂದು ದೊಡ್ಡ ಸದ್ದಿನೊಂದಿಗೆ ಸಂಚರಿಸಿದೆ. ಆದರೆ ಸ್ಥಳೀಯರು ಇದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ಅದೇ ರೀತಿ ದೊಡ್ಡ ಸದ್ದು ಕೇಳಿ ಬಂದಿದೆ. ಇದರ ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯ ಕಂಪನದ ಅನುಭವವಾಗಿದೆ.
ತಕ್ಷಣವೇ ಸ್ಥಳೀಯರು ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದ್ದಾರೆ. ಈ ವೇಳೆ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಕಂಡು ಬಂದಿದೆ. 40 ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನೆಲೆಸಿದ್ದೇವೆ. ಆದರೆ ರೈಲು ಸಂಚರಿಸುವಾಗ ಕಂಪನದ ಅನುಭವ ಇದೇ ಮೊದಲ ಎಂದು ಸ್ಥಳೀಯ ಮಹಿಳೆ ಹೇಳಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದೆ. ಸದ್ಯ ಸಂಭಾವ್ಯ ಅನಾಹುತವೊಂದು ತಪ್ಪಿದೆ.