image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಸಚಿವ ಸಂಪುಟ ಸಬೆ: ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಪರಿಶೀಲನೆ

ಕರಾವಳಿಯಲ್ಲಿ ಸಚಿವ ಸಂಪುಟ ಸಬೆ: ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಪರಿಶೀಲನೆ

ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಆಯೋಜನೆಯಾಗುತ್ತಿದ್ದು, ಸೆಪ್ಟೆಂಬರ್ 18 ರಂದು  ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರಾವಳಿ ಭಾಗದ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸುಸಜ್ಜಿತ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆಯಲಿದ್ದು, ಪ್ರಸ್ತುತ ಸಿದ್ಧತೆಗಳ ಪರಿಶೀಲನೆಗಾಗಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಕಚೇರಿಗೆ  ಭೇಟಿ ನೀಡಿ ಅಧಿಕಾರಿಗಳೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.

ಸಚಿವರ ಭೇಟಿಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಮುಖ್ಯಸ್ಥರು ಉಪಸ್ಥಿತರಿದ್ದರು. ಸಭೆ ಆಯೋಜನೆಗೊಳ್ಳಲಿರುವ ಕಾನ್ಫರೆನ್ಸ್ ಹಾಲ್, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಇತರೆ ಸಹೋದ್ಯೋಗಿ ಸಚಿವರಿಗೆ ಮೀಸಲಾದ ಪ್ರತ್ಯೇಕ ಕೊಠಡಿಗಳು, ಅಧಿಕಾರಿಗಳ ಲಾಂಜ್, ಮೈಕ್ ಮತ್ತು ಧ್ವನಿ ವ್ಯವಸ್ಥೆ ಹಾಗೂ ಸೂಕ್ತ ಆಸನ ವ್ಯವಸ್ಥೆಗಳನ್ನು ಖಾದರ್ ಅವರು ಸೂಕ್ಷ್ಮವಾಗಿ ಪರಿಶೀಲಿಸಿದರು. ರಾಜ್ಯದ ಚುಕ್ಕಾಣಿ ಹಿಡಿದ ಹಿರಿಯ ಮುಖಂಡರು ಮತ್ತು ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸುವುದರಿಂದ ಆತಿಥ್ಯ ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು  ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಸ್ಥಳ ಪರಿಶೀಲನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, "ನೂತನ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಬೆಂಗಳೂರಿನ ಗಡಿ ದಾಟಿ ಕರಾವಳಿ ಮಣ್ಣಿನಲ್ಲಿ ನಡೆಯುತ್ತಿರುವ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಮುಖ್ಯಮಂತ್ರಿಗಳು ಹಿಂದೆ ಈ ಭಾಗದ ಜನತೆಗೆ ನೀಡಿದ್ದ ಅಭಯದಂತೆ ಮಂಗಳೂರಿನಲ್ಲಿ ಸಂಪುಟ ಸಭೆಯನ್ನು ನಿಗದಿಪಡಿಸಿದ್ದು, ಈ ಕರಾವಳಿ ಭೂಮಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ಸಚಿವ ಸಂಪುಟಕ್ಕೆ ಜಿಲ್ಲೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಹರ್ಷ ವ್ಯಕ್ತಪಡಿಸಿದರು. ಸಂಪುಟ ಸಭೆಯು ಇಡೀ ರಾಜ್ಯದ ಸಮಗ್ರ ಅಭಿವೃದ್ಧಿ, ನೀತಿ-ನಿಯಮಗಳ ಅನುಮೋದನೆ ಹಾಗೂ ಹೊಸ ಯೋಜನೆಗಳ ನಿರ್ಣಯಕ್ಕೆ ಸೀಮಿತವಾಗಿದ್ದರೂ, ಮಂಗಳೂರಿನಲ್ಲಿ ನಡೆಯುತ್ತಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ದೀರ್ಘಕಾಲದ ಬೇಡಿಕೆಗಳಿಗೆ ವಿಶೇಷ ಒತ್ತು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ