ಮಂಗಳೂರು : ಭಾರತ ಸರ್ಕಾರದ ಗೃಹ ಮಂತ್ರಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) 'ಆಪದಮಿತ್ರ' ಯೋಜನೆಯಡಿ ತರಬೇತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ 300 ಸ್ವಯಂಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್‌ಗಳನ್ನು ಪುತ್ತೂರು ನಗರದ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಸಮ್ಮುಖದಲ್ಲಿ ವಿತರಿಸಲಾಯಿತು.
ಯಾವುದೇ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತು ಸಂಭವಿಸಿದಾಗ ಅಧಿಕೃತ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವ ಮೊದಲು ಸ್ಥಳೀಯ ಸಮುದಾಯವೇ ಪ್ರಥಮವಾಗಿ ಸ್ಪಂದಿಸುತ್ತದೆ. ವಿಪತ್ತಿನಿಂದಾಗುವ ಹಾನಿಯನ್ನು ತಗ್ಗಿಸಲು ಸಮುದಾಯದ ಸಾಮರ್ಥ್ಯಾವೃದ್ಧಿ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎನ್‌ಡಿಎಂಎ ದೇಶಾದ್ಯಂತ 1 ಲಕ್ಷ ಸಮುದಾಯ ಸ್ವಯಂಸೇವಕರನ್ನು ಸಜ್ಜುಗೊಳಿಸುತ್ತಿದೆ. ಕರ್ನಾಟಕದ ವಿಪತ್ತು ಪೀಡಿತ 11 ಜಿಲ್ಲೆಗಳ 3,400 ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದ್ದು, ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ 300 ಜನರನ್ನು ಗುರುತಿಸಿ ತರಬೇತಿ ನೀಡಲಾಗಿದೆ.
ಈ 300 ಸ್ವಯಂಸೇವಕರಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ, ಎನ್‌ಎಸ್‌ಎಸ್, ಎನ್‌ಸಿಸಿ, ಎನ್‌ವೈಕೆಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಗ್ರಾಮ ಮಟ್ಟದ ಸ್ವಯಂಸೇವಕರು ಸೇರಿದ್ದಾರೆ. ಸುರತ್ಕಲ್‌ನ ಎನ್‌ಐಟಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಸಭಾಂಗಣದಲ್ಲಿ 12 ದಿನಗಳ ಕಾಲ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ಭೂಕಂಪ, ಭೂಕುಸಿತ, ಪ್ರವಾಹ, ಸುನಾಮಿ, ಚಂಡಮಾರುತ, ರಾಸಾಯನಿಕ ವಿಪತ್ತುಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಅಗ್ನಿ ಮುಂಜಾಗ್ರತೆ ಹಾಗೂ ಬೋಟ್ ಮತ್ತು ರೋಪ್ ರಕ್ಷಣಾ ಕಾರ್ಯಾಚರಣೆಗಳ ಪ್ರಾಯೋಗಿಕ ಅಭ್ಯಾಸ ನೀಡಲಾಗಿದೆ. ಈಗಾಗಲೇ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ, ಗುರುತಿನ ಚೀಟಿ ಮತ್ತು ಕೈಪಿಡಿಗಳನ್ನು ವಿತರಿಸಲಾಗಿದ್ದು, ಇದೀಗ ರಕ್ಷಣಾ ಕಾರ್ಯದ ವೇಳೆ ಸ್ವಯಂ ರಕ್ಷಣೆಗಾಗಿ ಹೆಲ್ಮೆಟ್, ಗಂ ಬೂಟ್, ಲೈಫ್ ಜಾಕೆಟ್, ರೈನ್ ಕೋಟ್ ಹಾಗೂ ಟಾರ್ಚ್‌ಗಳನ್ನು ಒಳಗೊಂಡ ಕಿಟ್‌ಗಳನ್ನು ಹಸ್ತಾಂತರಿಸಲಾಗಿದೆ.