ಮಂಗಳೂರು : ಮನುಕುಲದ ನೆಮ್ಮದಿ ಮತ್ತು ಉದ್ಧಾರಕ್ಕಾಗಿ ಭಗವಾನ್ ಶ್ರೀ ಕೃಷ್ಣ ನೀಡಿದ ಸಂದೇಶವು ಜಗತ್ತಿಗೆ ಸಾರ್ವಕಾಲಿಕವಾಗಿ ಅಗತ್ಯವಿದ್ದು, ಪ್ರತಿಯೊಬ್ಬರೂ ಇದನ್ನು ಪಾಲಿಸಲು ಪಣತೊಡಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕೃಷ್ಣ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ತತ್ತ್ವ ಹಾಗೂ ಚಿಂತನೆಗಳು ಸಮಾಜದ ಎಲ್ಲಾ ವರ್ಗಗಳಿಗೂ ಪ್ರಸ್ತುತವಾಗಿವೆ. ಸತ್ಯ ಮತ್ತು ನ್ಯಾಯಕ್ಕೆ ಸದಾ ನಿಷ್ಠರಾಗಿದ್ದ ಕೃಷ್ಣನ ಸಂದೇಶಗಳು, ಉತ್ತಮ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪೂರಕವಾಗಿವೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಕರಾವಳಿ ಭಾಗದಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಪ್ರತಿಯೊಂದು ಮನೆಯಲ್ಲೂ ಮನೆಮಾಡಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಶ್ರೀ ಕೃಷ್ಣ ಜಯಂತಿಯನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಆಚರಣೆಗೆ ಹೆಚ್ಚಿನ ಮೆರುಗು ತರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ಟ ಗಾಳಿಮನೆ ಅವರು ಶ್ರೀ ಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಎಲ್ಲರನ್ನೂ ಸ್ವಾಗತಿಸಿದರು.
ಸಮಾರಂಭದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘದ ಅಧ್ಯಕ್ಷ ಟಿ.ಆರ್. ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿ ಸದಾನಂದ ಕಾವೂರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಔಪಚಾರಿಕ ಕಾರ್ಯಕ್ರಮದ ಬಳಿಕ ಶ್ರೀ ಕೃಷ್ಣನ ಮಹತ್ವ ಹಾಗೂ ಸಂದೇಶಗಳನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.