ಮಂಗಳೂರು : ಸಂಗೀತ, ಕರುಣೆ ಹಾಗೂ ಸಮುದಾಯ ಸೇವೆಯ ಅಪೂರ್ವ ಸಮ್ಮಿಲನದೊಂದಿಗೆ 'ಸಿಂಫನಿ ಆಫ್ ಹೋಪ್' ತಂಡವು ಮಂಗಳೂರು ರೌಂಡ್ ಟೇಬಲ್ ಟ್ರಸ್ಟ್ ಮತ್ತು ಮಂಗಳೂರು ಲೇಡೀಸ್ ಸರ್ಕಲ್ ಸಹಯೋಗದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಬಾಲ ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆ ವಿಭಾಗಕ್ಕೆ ₹29,00,000 ದೇಣಿಗೆ ನೀಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ಮತ್ತು ನೈತಿಕ ನೆರವು ನೀಡುವ ಉದ್ದೇಶದಿಂದ ಸೆಪ್ಟೆಂಬರ್ 4, 2026 ರಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆ. ಫಾ. ಫೌಸ್ಟಿನ್ ಲೂಕಾಸ್ ಲೋಬೋ ಅವರಿಗೆ ಈ ದೇಣಿಗೆಯ ಚೆಕ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಸಂಗೀತದ ಶಕ್ತಿಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ದೃಷ್ಟಿಕೋನದೊಂದಿಗೆ 'ಸಿಂಫನಿ ಆಫ್ ಹೋಪ್' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಅಭಿಯಾನವು ಪ್ರತಿಭಾವಂತ ಸಂಗೀತಗಾರರು ಮತ್ತು ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತಂದು, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳ ಆರೈಕೆಗೆ ನೆರವಾಗಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿತು. ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾದ ಕಿರು ವೀಡಿಯೊದಲ್ಲಿ ಸಂಗೀತ ಸಂಜೆಯ ಪ್ರಮುಖ ಕ್ಷಣಗಳು, ಕಲಾವಿದರ ಶ್ರಮ ಹಾಗೂ ಸಂಘಟಕರ ಸಮರ್ಪಣಾ ಮನೋಭಾವವನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೋ ನಿರ್ದೇಶಕಿ ಮುನಿತಾ ರಾವ್, ಸಂಗೀತವು ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದಲ್ಲಿ ಭರವಸೆ ಹಾಗೂ ಬದಲಾವಣೆ ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು. ಅಲ್ಲದೆ, ಮಂಗಳೂರು ರೌಂಡ್ ಟೇಬಲ್ ಟ್ರಸ್ಟ್, ಲೇಡೀಸ್ ಸರ್ಕಲ್ ಹಾಗೂ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್, ಗ್ಲೋಬಲ್ ಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್, ಮೈಕೆಲ್ ಡಿಸೋಜಾ ಕುಟುಂಬ, ರೋನಾಲ್ಡ್ ಪಿಂಟೋ ಕುಟುಂಬ ಸೇರಿದಂತೆ ಬೆಂಬಲಿಸಿದ ಎಲ್ಲಾ ಪ್ರಮುಖ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಿಂಫನಿ ಆಫ್ ಹೋಪ್ ನಿರ್ದೇಶಕಿ ಮುನಿತಾ ರಾವ್, ಮಂಗಳೂರು ರೌಂಡ್ ಟೇಬಲ್ ಟ್ರಸ್ಟ್ ಅಧ್ಯಕ್ಷ ಸ್ವೆನ್ ಆಲ್ಬುಕರ್ಕ್ ಹಾಗೂ ಮಂಗಳೂರು ಲೇಡೀಸ್ ಸರ್ಕಲ್ ಅಧ್ಯಕ್ಷೆ ಮಿಚೆಲ್ ಡಿಸೋಜಾ ಅವರು ಜಂಟಿಯಾಗಿ ರೆ. ಫಾ. ಫೌಸ್ಟಿನ್ ಲೂಕಾಸ್ ಲೋಬೋ ಅವರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಫಾ. ಫೌಸ್ಟಿನ್, ಡಾ. ಜೋಯ್ಲಿನ್ ಡಿ. ಅಲ್ಮೇಡಾ, ನಯನಾ ಫೆರ್ನಾಂಡಿಸ್ ಮತ್ತು ಮುನಿತಾ ರಾವ್ ಅವರು ಕೆಲವು ತಿಂಗಳ ಹಿಂದೆ ಕನಸೊಂದನ್ನು ಹೊತ್ತು ಬಂದಾಗ ಇದರ ವ್ಯಾಪ್ತಿ ಇಷ್ಟೊಂದು ದೊಡ್ಡ ಮಟ್ಟದಲ್ಲಿರುತ್ತದೆ ಎಂದು ಊಹಿಸಿರಲಿಲ್ಲ ಎಂದರು. ಸ್ಥಳೀಯ ಮತ್ತು ಹೊರನಾಡಿನ ಮಂಗಲೂರು ಮೂಲದ ಕಲಾವಿದರನ್ನು ಒಗೂಡಿಸಿ ನಡೆಸಿದ ಈ ಸಾಹಸವನ್ನು ಸಮಾಜಕ್ಕೆ ನೀಡಿದ ಶ್ರೇಷ್ಠ ಕೊಡುಗೆ ಎಂದು ಬಣ್ಣಿಸಿದ ಅವರು, ಯೇಸು ಕ್ರಿಸ್ತರ 'ನಿನ್ನ ನೆರೆಯವನನ್ನು ಪ್ರೀತಿಸು' ಎಂಬ ಸಂದೇಶಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು. ಇಲ್ಲಿ ಸಂಗ್ರಹವಾದ ಪ್ರತಿಯೊಂದು ರೂಪಾಯಿಯೂ ಮಗುವಿನ ಗುಣಮುಖತೆಗೆ ಮತ್ತು ಅವರ ಕುಟುಂಬದ ಹೊರೆ ತಗ್ಗಿಸಲು ನೆರವಾಗಲಿದೆ ಎಂದು ಹೇಳಿದರು.
ಈ ₹29 ಲಕ್ಷ ಮೊತ್ತದ ಸಹಾಯಧನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗಾಗಿ ಬಳಸಲಾಗುತ್ತದೆ. ಈ ಮಹತ್ಕಾರ್ಯಕ್ಕೆ ಫಾದರ್ ಮುಲ್ಲರ್ ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ಬಾಲ ಹೆಮಾಟೊ-ಆಂಕಾಲಜಿ ವಿಭಾಗ ಸಂಪೂರ್ಣ ಬೆಂಬಲ ನೀಡಿದ್ದು, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಶೆಟ್ಟಿ ಅವರು ಸಂಘಟಕರು ಹಾಗೂ ದಾನಿಗಳಿಗೆ ಧನ್ಯವಾದ ಅರ್ಪಿಸಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ರೆ. ಡಾ. ಮೈಕಲ್ ಸಾಂತುಮಾಯೋರ್, ರೆ. ಫಾ. ಜಾರ್ಜ್ ಜೀವನ್ ಸಿಕ್ವೇರಾ, ರೆ. ಫಾ. ವಿಲಿಯಂ ಡಿಸೋಜಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಜೊತೆಗೆ ಸಿಂಫನಿ ಆಫ್ ಹೋಪ್ ಸಮಿತಿಯ ರಾಮೋನಾ ಮಥಾಯಸ್, ಆಶಿಶ್ ರಾವ್, ಲಿಯಾ ಮಸ್ಕರೇನ್ಹಸ್, ದೀಪಕ್ ರಮಣಿ, ಕ್ಲಿಂಟನ್ ಮಸ್ಕರೇನ್ಹಸ್, ಸಿಮಿ ಡಿಸೋಜಾ, ಮೆಲಿಟಾ ಸಿಕ್ವೇರಾ, ಹ್ಯಾರನ್ ಫೆರ್ನಾಂಡಿಸ್, ಶಾಂತಿ ಹಾಗೂ ಡಾ. ಜೋಯ್ಲಿನ್ ಡಿ. ಅಲ್ಮೇಡಾ ಭಾಗವಹಿಸಿದ್ದರು. ಫಾದರ್ ಮುಲ್ಲರ್ ಸಂಸ್ಥೆಯ ಸಂಪರ್ಕಾಧಿಕಾರಿ ಡಾ. ಕೆಲ್ವಿನ್ ಪೀಟರ್ ಪಾಯಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಗೀತದಿಂದ ಆರಂಭವಾದ ಈ ಪ್ರಯಾಣವು ಇಂದು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನೂರಾರು ಕಂದಮ್ಮಗಳ ಬಾಳಿನಲ್ಲಿ ನವ ಭರವಸೆಯ ಬೆಳಕಾಗಿ ಮೂಡಿದೆ.