ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪಠ್ಯಪುಸ್ತಕದ ಕಲಿಕೆಗೆ ಸೀಮಿತಗೊಳಿಸದೆ ಪ್ರಯೋಗ, ಅನುಭವ ಮತ್ತು ಸಂಶೋಧನೆಗಳ ಮೂಲಕ ಅರ್ಥೈಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.
ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ಆವೃತ್ತಿಯ ‘ಅಭಿಜ್ಞ’ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನವು ಕುತೂಹಲದಿಂದ ಕಲಿಯುವ ಮತ್ತು ನೈಜ ಜೀವನದೊಂದಿಗೆ ಸಂಪರ್ಕ ಹೊಂದುವ ಕ್ಷೇತ್ರವಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಒತ್ತಡಕ್ಕೆ ಮಣಿಯದೆ ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನೆ ಬಲಗೊಂಡಾಗ ದೇಶದ ಪ್ರಗತಿಯೂ ವೇಗ ಪಡೆಯುತ್ತದೆ ಎಂದು ಹೇಳಿದರು.
ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುರತ್ಕಲ್‌ನ ಎನ್‌ಐಟಿಕೆ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರುಣ್ ಎಂ. ಇಸ್ಲೂರ್ ಮಾತನಾಡಿ, ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಪ್ರಮುಖ ಪರಿಸರ ಸವಾಲಾಗಿದೆ. ಇದರ ದುಷ್ಪರಿಣಾಮಗಳ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ಜಾಗೃತಿ ಅಗತ್ಯವಿದೆ. ವಿದ್ಯಾರ್ಥಿಗಳು ಭಯ ಅಥವಾ ಒತ್ತಡದಿಂದ ವಿಜ್ಞಾನ ಆಯ್ಕೆ ಮಾಡದೆ, ಭವಿಷ್ಯದ ಅವಕಾಶಗಳನ್ನು ಅರಿತು ತಮ್ಮ ಆಸಕ್ತಿಯಿಂದ ಕಲಿಯಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಾಗಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ೨೧೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೈವಿಕ ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ಹಾಗೂ ಸಂಖ್ಯಾಶಾಸ್ತ್ರ ಸೇರಿದಂತೆ ಒಂಬತ್ತು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ (ಹ್ಯಾಂಡ್ಸ್-ಆನ್) ನೀಡಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ, ವಿದ್ಯಾರ್ಥಿ ಸಂಯೋಜಕರಾದ ತೇಜಸ್ ಡಿ. ಪೂಜಾರಿ, ಗಣೇಶ್ ಹೆಗಡೆ ಹಾಗೂ ಉಪನ್ಯಾಸಕರಾದ ಪವಿತ್ರಾ, ನಿಶಾ ಕೆ. ಎಂ. ಉಪಸ್ಥಿತರಿದ್ದರು. ತೇಜಸ್ ಡಿ. ಪೂಜಾರಿ ಸ್ವಾಗತಿಸಿ, ಖುಷಿ ಮಣ್ಣೂರು ಕಾರ್ಯಕ್ರಮ ನಿರೂಪಿಸಿದರು.