ಮೂಡುಬಿದಿರೆ: ವೇದ, ಉಪನಿಷತ್ತು, ದರ್ಶನ, ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಪಾರ ಸಂಪತ್ತನ್ನು ತನ್ನೊಳಗೆ ಅಡಕಗೊಳಿಸಿಕೊಂಡಿರುವ ಸಂಸ್ಕೃತವು ಕೇವಲ ಪ್ರಾಚೀನ ಭಾಷೆಯಲ್ಲ, ಬದಲಾಗಿ ಜಗತ್ತಿಗೆ ಜ್ಞಾನ ಮತ್ತು ಚಿಂತನೆಯ ಬೆಳಕು ನೀಡಿದ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಜಯಶಂಕರ್ ಕಂಗಣ್ಣಾರು ನುಡಿದರು.
ಇಲ್ಲಿನ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಬುಧವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ‘ಸಂಸ್ಕೃತದ ವಿಶ್ವ ವೈಭವ’ ಕುರಿತು ಅವರು ಮಾತನಾಡಿದರು. ಸಂಸ್ಕೃತವು ವೇದಗಳ ಮೂಲಕ ಭಾರತೀಯ ಸಾಂಸ್ಕೃತಿಕ ಜಗತ್ತಿಗೆ ಶಾಂತಿ, ಸಹಬಾಳ್ವೆ ಮತ್ತು ಲೋಕಕಲ್ಯಾಣದ ಸಂದೇಶ ನೀಡಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ. ಸಂಸ್ಕೃತದಲ್ಲಿ ಕೇವಲ ಧಾರ್ಮಿಕ ಸಾಹಿತ್ಯ ಮಾತ್ರವಲ್ಲದೆ ಕಾವ್ಯ, ವ್ಯಾಕರಣ, ತತ್ವಶಾಸ್ತ್ರ, ಗಣಿತ, ಖಗೋಳ, ಆಯುರ್ವೇದ, ಯೋಗ ಹಾಗೂ ಭಾಷಾಶಾಸ್ತ್ರ ಸೇರಿದಂತೆ ಅಪಾರ ಜ್ಞಾನ ಭಂಡಾರವಿದೆ ಎಂದು ತಿಳಿಸಿದರು.
ಸಂಸ್ಕೃತದಲ್ಲಿ ಏನಿಲ್ಲ ಎಂದು ಕೇಳುವುದಕ್ಕಿಂತ ಏನೆಲ್ಲ ಇದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು. ಭಾರತೀಯ ಭಾಷೆಗಳ ಪದಸಂಪತ್ತು ಮತ್ತು ಬೆಳವಣಿಗೆಯಲ್ಲಿ ಸಂಸ್ಕೃತದ ಪಾತ್ರ ದೊಡ್ಡದಿದೆ. ಶ್ಲೋಕ ಮತ್ತು ಸುಭಾಷಿತಗಳನ್ನು ಪಠಣಕ್ಕೆ ಸೀಮಿತಗೊಳಿಸದೆ ಅವುಗಳಲ್ಲಿರುವ ಜೀವನದರ್ಶನವನ್ನು ಇಂದಿನ ಪೀಳಿಗೆ ಗ್ರಹಿಸಬೇಕು. ಸಂಸ್ಕೃತವನ್ನು ಹಿಂದಿನ ಕಾಲದ ಭಾಷೆಯಾಗಿ ನೋಡುವ ಬದಲು ಜೀವಂತ ಅಧ್ಯಯನ ಕ್ಷೇತ್ರವಾಗಿ ಪರಿಚಯಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಸಂಹಿತಾ ಹಾಗೂ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಸರಸ್ವತಿ ತಂತ್ರಾಂಶಗಳಲ್ಲಿ ಸಂಸ್ಕೃತವನ್ನು ಬಳಸುವ ಕುರಿತು ಮಾಹಿತಿ ನೀಡಿದರು. ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿ ಅತಿಥಿಗಳನ್ನು ಪರಿಚಯಿಸಿ, ಮಾನ್ಯ ಸ್ವಾಗತಿಸಿದರು. ಅನನ್ಯ ಹೆಗಡೆ ಪ್ರಾರ್ಥಿಸಿ, ಚೇತನಾ ವಂದನಾರ್ಪಣೆ ನೆರವೇರಿಸಿದರೆ, ಶಮಾ ಕಾರ್ಯಕ್ರಮ ನಿರೂಪಿಸಿದರು.