ಧರ್ಮಸ್ಥಳ : ಅಂತಾರಾಷ್ಟ್ರೀಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಜಪಾನ್‌ನ ೬ ವಿದ್ಯಾರ್ಥಿಗಳ ನಿಯೋಗವು ಉಜಿರೆಯ ಎಸ್.ಡಿ.ಎಂ. ಕಾಲೇಜಿಗೆ ಆಗಮಿಸಿದ್ದು, ವಿವಿಧ ಕ್ಷೇತ್ರಗಳ ಮಾಹಿತಿ ಸಂಗ್ರಹಣೆ ಆರಂಭಿಸಿದೆ. ಉಜಿರೆಗೆ ಆಗಮಿಸಿದ ಜಪಾನ್ ತಂಡವು ಪ್ರಥಮವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಮಂಜೂಷಾ ವಸ್ತುಸಂಗ್ರಹಾಲಯ, ವಿಂಟೇಜ್ ಕಾರುಗಳ ಸಂಗ್ರಹಾಲಯ, ಅನ್ನಪೂರ್ಣ ಛತ್ರ, ಬಾಹುಬಲಿ ಬೆಟ್ಟ ಹಾಗೂ ಬಸದಿಗೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಿಸಿತು.
ಜಪಾನ್‌ನಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಗೊಟೊ ರೈಯೋಹೆ ಮತ್ತು ಇಕೆಡಾ ಅಕಾರಿ ಎಂಬ ಇಬ್ಬರು ವಿದ್ಯಾರ್ಥಿಗಳು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಒಂದು ತಿಂಗಳ ಕಾಲ ವಿಶೇಷ ಅಧ್ಯಯನ ನಡೆಸಲಿದ್ದಾರೆ. ಆಗಮಿಸಿದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಪ್ರೊ. ಎಸ್. ಸತೀಶ್ಚಂದ್ರ, ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ., ಸಿ.ಇ.ಒ. ಪೂರನ್‌ವರ್ಮ ಹಾಗೂ ಮನೋರಮಾ ಭಟ್ ಪೂರಕ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಈ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಎಸ್.ಡಿ.ಎಂ. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಾಲಿನಿ ಅಂಚನ್ ಹಾಗೂ ವಿದ್ಯಾರ್ಥಿಗಳಾದ ಕು. ಸಂಜನಾ ಮತ್ತು ಕು. ಸಿಂಚನಾ ಜಪಾನ್‌ನಲ್ಲಿ ೧೧ ದಿನಗಳ ಕಾಲ ನೆರವೇರಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ತುಳುನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ, ಜಾನಪದ ಕಲೆಗಳು, ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಜಪಾನ್‌ನ ಜನರಿಗೆ ಪರಿಚಯಿಸಿಕೊಟ್ಟಿದ್ದರು.