ಸುಳ್ಯ : ಸುಳ್ಯದ ಕೊಡಿಯಾಲ ಬೈಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ಕಲಾವಿದ, ದೈವದ ಪಾತ್ರಿ ಹಾಗೂ ತುಳು ಯಕ್ಷಗಾನ ಪ್ರಸಂಗ ಕರ್ತೃ ಎ. ಕೇಪು ಅಜಿಲ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 'ಚಾವಡಿ ತಮ್ಮನ' ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ ಈ ಗೌರವಾರ್ಪಣೆಯನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ನಾಡು-ನುಡಿಗೆ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು ಅವರ ಹುಟ್ಟೂರಿನಲ್ಲಿಯೇ ಗೌರವಿಸುವ ಕಾರ್ಯವನ್ನು ಅಕಾಡೆಮಿ ನಡೆಸುತ್ತಿದೆ ಎಂದರು. ಕೇಪು ಅಜಿಲರ 60 ವರ್ಷಗಳ ಸುದೀರ್ಘ ಸೇವೆಯು ತುಳುನಾಡಿನ ಜಾನಪದ ಪರಂಪರೆಗೆ ಸಂದ ಅನನ್ಯ ಕೊಡುಗೆಯಾಗಿದೆ ಎಂದು ಅವರು ಬಣ್ಣಿಸಿದರು. ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ. ಸುಧಾಕರ ರೈ ಮಾತನಾಡಿ, ಕೇಪು ಅಜಿಲರು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಲಾವಿದ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮತ್ತು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್.ಪಿ, ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಜಿ. ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ ಸ್ವಾಗತಿಸಿದರು, ವಿದ್ಯಾರ್ಥಿನಿ ಸಹನಾ ಸನ್ಮಾನ ಪತ್ರ ವಾಚಿಸಿದರು, ವಿದ್ಯಾರ್ಥಿನಿ ಹಂಸಿನಿ ವಂದಿಸಿದರು ಹಾಗೂ ಕಾಲೇಜಿನ ತುಳು ಸಂಘದ ಅಧ್ಯಕ್ಷೆ ಗುಣಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.