ಮಂಗಳೂರು: ಕಲಾಸಾಧನ ಸಂಸ್ಥೆಯ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಸೆ.6ರಂದು ಸಂಜೆ 5 ಗಂಟೆಗೆ ನಗರದ ಶ್ರೀರಾಮಕೃಷ್ಣ ಮಠದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಭ್ರಮ ‘ರಾಗ ಸುಧಾ’ ಆಯೋಜಿಸಲಾಗಿದೆ ಎಂದು ಕಲಾಸಾಧನ ಸಂಸ್ಥೆಯ ನಿರ್ದೇಶಕಿ ವಿಭಾ ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ವಾಲಿಯರ್ ಘರಾನಾದ ಖ್ಯಾತ ಕಲಾವಿದ ಡಾ. ಪಂಡಿತ್ ರಾಮ್ ದೇಶಪಾಂಡೆ ಅವರ ಹಿರಿಯ ಶಿಷ್ಯ ಹಾಗೂ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್, ಗ್ವಾಲಿಯರ್-ಕಿರಾಣಾ ಪದ್ಧತಿಯ ಗಾಯಕ ಮತ್ತು ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್ ಹಾಗೂ ಪಂಡಿತ್ ಮಾಣಿಕ್ ರಾವ್ ಗೋನ್ವಾರ್ ಅವರ ಶಿಷ್ಯ, ತಬಲಾ ವಾದಕ ಮತ್ತು ಗಾಯಕ ಅಕ್ಷಯ ಜೋಶಿ ಸಂಗೀತ ಪ್ರಸ್ತುತಪಡಿಸಲಿದ್ದಾರೆ ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಬಳಿಕ ಗಣ್ಯರಿಂದ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಸಂಗೀತಾಸಕ್ತರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಕಲಾಸಾಧನ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ವಿಭಾ ಶ್ರೀನಿವಾಸ್ ನಾಯಕ್ ಹೇಳಿದರು.
ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ‘ರಾಗ ಸುಧಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.