image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆಯ ಬಂದಾರಿನಲ್ಲಿ ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ: ಆತಂಕದಲ್ಲಿ ರೈತರು

ಉಜಿರೆಯ ಬಂದಾರಿನಲ್ಲಿ ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶ: ಆತಂಕದಲ್ಲಿ ರೈತರು

ಉಜಿರೆ: ಉಜಿರೆ ಸಮೀಪದ ಬಂದಾರು ಗ್ರಾಮದ ಬೈಪಾಡಿ ಸೋನಕುಮೇರು ನಿವಾಸಿ ಚಿದಾನಂದ ಗೌಡ ಎಂಬವರ ಗದ್ದೆಗೆ ತಡರಾತ್ರಿ ಕಾಡಾನೆಯೊಂದು ದಿಢೀರ್ ಲಗ್ಗೆ ಇಟ್ಟು, ಕಷ್ಟಪಟ್ಟು ಬೆಳೆಸಿದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು ನಾಶಪಡಿಸಿದೆ. ಕಾಡಾನೆಯ ಈ ಹಾವಳಿಯಿಂದಾಗಿ ಕಷ್ಟಪಟ್ಟು ಪೋಷಿಸಿ ಕೊಯ್ಲಿಗೆ ಸಿದ್ಧವಾಗುತ್ತಿದ್ದ ಅಪಾರ ಪ್ರಮಾಣದ ಭತ್ತದ ಪೈರು ನೆಲಸಮಗೊಂಡಿದ್ದು, ರೈತ ಚಿದಾನಂದ ಗೌಡರಿಗೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ನೆಮ್ಮದಿಯ ಕೃಷಿ ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ನುಗ್ಗುವ ಆನೆಗಳು ಕೇವಲ ಭತ್ತದ ಬೆಳೆಯನ್ನಷ್ಟೇ ಅಲ್ಲದೆ ಅಡಿಕೆ, ಬಾಳೆ ಹಾಗೂ ತೆಂಗಿನ ಸಸಿಗಳನ್ನು ನಾಶಪಡಿಸುತ್ತಿವೆ. ಇದರಿಂದಾಗಿ ವರ್ಷಪೂರ್ತಿ ಬೆವರು ಹರಿಸಿ ಕೃಷಿ ಮಾಡಿದ ರೈತರು ಕಣ್ಣೀರ ಕೊಲೆಯಲ್ಲಿ ಕೈತೊಳೆಯುವಂತಾಗಿದ್ದು, ತೀವ್ರ ಸಂಕಷ್ಟ ಮತ್ತು ಆತಂಕದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

ಅರಣ್ಯ ಪ್ರದೇಶದಿಂದ ಹೊರಬರುವ ಕಾಡಾನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಗೆ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆ ತಕ್ಷಣ ಸೂಕ್ತ ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಕೃಷಿಕರು ಆಗ್ರಹಿಸಿದ್ದಾರೆ. ಸೋಲಾರ್ ಬೇಲಿ ನಿರ್ಮಾಣ ಹಾಗೂ ಆನೆ ಕಂದಕಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸದಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ಕೃಷಿಕ ಚಿದಾನಂದ ಗೌಡ ಅವರ ಗದ್ದೆಗೆ ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಶೀಘ್ರವೇ ಯೋಗ್ಯ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಈ ಭಾಗದಲ್ಲಿ ಗಸ್ತು ಪಡೆ ಹೆಚ್ಚಿಸಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

Category
ಕರಾವಳಿ ತರಂಗಿಣಿ