ಮೂಡುಬಿದಿರೆ : ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ರಕ್ಷಿಸುವಂತೆಯೇ ಭೂಮಿತಾಯಿಯೂ ಸಮಸ್ತ ಜೀವರಾಶಿಯನ್ನು ಸಲಹುತ್ತಾಳೆ. ಆದ್ದರಿಂದ ತಾಯಿಯ ಮೇಲಿನ ಪ್ರೀತಿ ಹಾಗೂ ಗೌರವವನ್ನು ಪರಿಸರ ಸಂರಕ್ಷಣೆಯೊಂದಿಗೆ ಬೆಸೆಯುವ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ಅಭಿಪ್ರಾಯಪಟ್ಟರು.
ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ಆಯೋಜಿಸಿದ್ದ ‘ಏಕ್ ಪೇಡ್ ಮಾ ಕೆ ನಾಮ್ 3.0’ ವೃಕ್ಷಾರೋಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಿಡ ನೆಡುವುದು ಬರಿ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಪರಿಸರ ಕಾಳಜಿಯನ್ನು ಜನಾಂದೋಲನವನ್ನಾಗಿ ಮಾಡುವ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನದಂದು ಚಾಲನೆ ನೀಡಿದ ಈ ಅಭಿಯಾನವು ದೇಶಾದ್ಯಂತ ಜನರಲ್ಲಿ ಹಸಿರು ಕಾಳಜಿ ಮೂಡಿಸುತ್ತಿದೆ. ತಾಯಿ ನಮಗೆ ಜೀವ ಮತ್ತು ಆಶ್ರಯ ನೀಡಿದರೆ, ಭೂಮಿತಾಯಿ ನೀರು ಹಾಗೂ ಶುದ್ಧ ಗಾಳಿ ಒದಗಿಸುತ್ತಾಳೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಾಯಿಯ ಸವಿನೆನಪಿನಲ್ಲಿ ಒಂದು ಗಿಡ ನೆಟ್ಟು ಪೋಷಿಸುವುದು ಪ್ರಕೃತಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ 120 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಸಿಗಳನ್ನು ನೆಟ್ಟರು. ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆಯ ಜವಾಬ್ದಾರಿಯ ಕುರಿತೂ ಅರಿವು ಪಡೆದರು. ಈ ಸಂದರ್ಭದಲ್ಲಿ ಇಕೋ ಕ್ಲಬ್ ಸಂಚಾಲಕಿ ಅಕ್ಷತಾ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಹಾಗೂ ವಿಭಾಗೀಯ ಮುಖ್ಯಸ್ಥರಾದ ಕುಮಾರ್ ಮತ್ತು ಅನಿಲ್ ಮಸ್ಕರೇನಸ್ ಉಪಸ್ಥಿತರಿದ್ದರು.