ಮಂಗಳೂರು: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು 'ಸಾಂದೀಪನಿ ಶಿಷ್ಯವೇತನ' ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಚಾಲ್ತಿಯಲ್ಲಿರುವ ಇಡಬ್ಲ್ಯೂಎಸ್ (EWS) ಪ್ರಮಾಣಪತ್ರವನ್ನು ಹೊಂದಿರಬೇಕು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮತ್ತು ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ನಿರ್ವಹಣಾ ವೆಚ್ಚವಾಗಿ ₹15,000 ಶಿಷ್ಯವೇತನ ನೀಡಲಾಗುತ್ತದೆ.
ಸಿಇಟಿ ಹಾಗೂ ನೀಟ್‌ನಂತಹ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ಪದವಿ ಅಥವಾ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದ 2/3 ಭಾಗವನ್ನು ಮರುಪಾವತಿಸಲಾಗುತ್ತದೆ. ಆದರೆ, ವೃತ್ತಿಪರ ಕೋರ್ಸ್‌ಗಳಿಗೆ ಮ್ಯಾನೇಜ್‌ಮೆಂಟ್ ಕೋಟಾ ಅಥವಾ ಕಾಮೆಡ್-ಕೆ ಅಡಿಯಲ್ಲಿ ಪ್ರವೇಶ ಪಡೆದವರು ಈ ಶುಲ್ಕ ಮರುಪಾವತಿಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಯು ಎನ್‌ಪಿಸಿಐ (NPCI) ಅಡಿಯಲ್ಲಿ ಸೀಡ್ ಆಗಿರುವುದು ಕಡ್ಡಾಯ. ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ (www.ksbdb.karnataka.gov.in) ಮೂಲಕ ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ದೂರವಾಣಿ ಸಂಖ್ಯೆ 8029605888, 8762249230 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ (0824-2453222) ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.