image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಸೆ. 6ರಂದು ಅಂತರ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ

ಮಂಗಳೂರಿನಲ್ಲಿ ಸೆ. 6ರಂದು ಅಂತರ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ

ಮಂಗಳೂರು: ಬಂಟರ ಯಾನೇ ನಾದವರ ಮಾತೃ ಸಂಘ (ರಿ), ಶ್ರೀ ಸಿದ್ಧಿವಿಲಾಸ (ಸಿದ್ಧಿ ವಿನಾಯಕ) ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ, ಬಂಟ್ಸ್ ಹಾಸ್ಟೆಲ್ ಮಂಗಳೂರು ಇವುಗಳ ಸಹಯೋಗದೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆಪ್ಟೆಂಬರ್ 6 ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಶಾಲಾ ಮೈದಾನದಲ್ಲಿ ಅಂತರ ಜಿಲ್ಲಾ ಮಟ್ಟದ 'ಬಂಟ ಕ್ರೀಡೋತ್ಸವ' ಆಯೋಜಿಸಲಾಗಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅಡ್ಯಾರ್ ಗುತ್ತು ಜಯಶೀಲ ಅಡ್ಯಂತಾಯ ತಿಳಿಸಿದರು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ನಡೆಯುವ ಈ ಕ್ರೀಡಾಕೂಟವು ಅಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. 1ನೇ ತರಗತಿಯಿಂದ 70 ವರ್ಷದ ವಯೋಮಾನದವರೆಗಿನ ಎಲ್ಲ ವಯೋ ಗುಂಪಿನವರಿಗೆ ವಿವಿಧ ಆಕರ್ಷಕ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗಾಗಿ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ವಿಶಿಷ್ಟ ಜಾನಪದ ಕ್ರೀಡೆಗಳು ನಡೆಯಲಿದ್ದು, ಪುರುಷರಿಗಾಗಿ ಹಗ್ಗಜಗ್ಗಾಟ ಸೇರಿದಂತೆ ಹಲವು ಸ್ಪರ್ಧೆಗಳು ಜರುಗಲಿವೆ. ಇದರೊಂದಿಗೆ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ 'ಮೃದು ಕೃಷ್ಣ' ಹಾಗೂ 'ಬಾಲಕೃಷ್ಣ' ವೇಷ ಧರಿಸುವ ಸ್ಪರ್ಧೆಗಳು ಮತ್ತು ಸ್ಥಳದಲ್ಲೇ ಮನರಂಜನಾ ಪಂದ್ಯಗಳು ನಡೆಯಲಿವೆ.

ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಾಧಕ ಕ್ರೀಡಾಪಟುಗಳನ್ನು ಗೌರವಿಸಲಾಗುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಈ ಸ್ಪರ್ಧೆಗಳಲ್ಲಿ ವಿಜೇತರಾಗುವ ಉತ್ತಮ ಕ್ರೀಡಾಪಟುಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಂಘಟನೆಯ ಮೂಲಕ ವಿಶೇಷ ಪ್ರೋತ್ಸಾಹ ಮತ್ತು ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಆಶಾಜ್ಯೋತಿ ರೈ, ಶ್ರೀ ಸದಾಶಿವ ಶೆಟ್ಟಿ, ಶ್ರೀ ಜಯಶೀಲ ಅಡ್ಯಂತಾಯ ಹಾಗೂ ಶ್ರೀ ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ