ಮಂಗಳೂರು : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ಎನ್‌ಜಿಒ) ತನ್ನ 25 ವರ್ಷಗಳ ಯಶಸ್ವಿ ಪಯಣದ ಅಂಗವಾಗಿ 2026ರ ಸೆಪ್ಟೆಂಬರ್ 6ರ ಭಾನುವಾರದಂದು ಮಂಗಳೂರಿನ ಹಂಪನಕಟ್ಟೆಯ ಕುದ್ಮುಲ್ ರಂಗರಾವ್ ಟೌನ್‌ಹಾಲ್‌ನಲ್ಲಿ ಮಧ್ಯಾಹ್ನ 3.00 ಗಂಟೆಗೆ ಬೆಳ್ಳಿಹಬ್ಬ ಸಮಾರಂಭವನ್ನು ಆಯೋಜಿಸಿದೆ ಎಂದು ಸಂಸ್ಥೆಯ ರಾಜ್ಯ ಪ್ರತಿನಿಧಿ ಜಗದೀಶ್ ಅಧಿಕಾರಿ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿಈಈ ಬಗ್ಗೆ ಮಾಹಿತಿ ನೀಡಿದ ಅವರು,
ಅವಿಭಜಿತ ದಕ್ಷಿಣ ಕನ್ನಡ (ಮಂಗಳೂರು ಮತ್ತು ಉಡುಪಿ) ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆಯ ಧ್ಯೇಯದೊಂದಿಗೆ 2000ರ ಸೆಪ್ಟೆಂಬರ್ 5ರಂದು ಸಂಸ್ಥಾಪನೆಯಾದ ಈ ಸಂಸ್ಥೆಯು ಪರಿಸರ ಸಂರಕ್ಷಣೆ, ಉದ್ಯೋಗ ಸೃಷ್ಟಿ ಹಾಗೂ ಬಡತನ ನಿರ್ಮೂಲನೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.
ಈ ವೈಭವೋಪೇತ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ನೆರವೇರಿಸಲಿದ್ದು, ಸಮಿತಿಯ ಅಧ್ಯಕ್ಷರಾದ ತೋನ್ಸೆ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಜಾಗತಿಕ ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಮುಖ್ಯ ದಿಕ್ಸೂಚಿ ಭಾಷಣ ಮಾಡಲಿದ್ದು, ಸಂಸ್ಥೆಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಸಂಸ್ಥೆಯ ಅಭಿವೃದ್ಧಿ ಯೋಜನೆ ಹಾಗೂ ದೂರದೃಷ್ಟಿಯ ಕುರಿತು ವಿಷಯ ಮಂಡಿಸಲಿದ್ದಾರೆ.
ಸಮಾರಂಭದಲ್ಲಿ ಸಚಿವರಾದ ಯು. ಟಿ. ಖಾದರ್, ಕೆ. ಜೆ. ಜಾರ್ಜ್, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಅಶೋಕ್ ರೈ, ರಾಜೇಶ್ ನಾಯ್ಕ್ ಉಳೆಪಾಡಿಗುತ್ತು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್, ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ, ಡಾ. ಕೆ. ಪ್ರಕಾಶ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಧರ್ಮಪಾಲ್ ದೇವಡಿಗ, ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಡಾ. ಜಕರಿಯಾ ಜೋಕಟ್ಟೆ ಸೇರಿದಂತೆ ಪ್ರಮುಖ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಧ್ಯಾಹ್ನ 3.00 ರಿಂದ 4.00 ಗಂಟೆಯವರೆಗೆ ಪುತ್ತೂರಿನ ನಾಟ್ಯರಂಗ ತಂಡದಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರ ನಿರ್ದೇಶನದಲ್ಲಿ "ನಾಟ್ಯ ಲಹರಿ" ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ರಾತ್ರಿ 7.30ಕ್ಕೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಯಕೃಷ್ಣ, ಹರೀಶ್ ಕುಮಾರ್ ಎಂ. ಶೆಟ್ಟಿ, ಸುರೇಂದ್ರ ಮೆಂಡನ್, ಶಂಕರ ಸುವರ್ಣ, ಸದಾನಂದ ಆಚಾರ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.