image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ (ರಿ.) ಕದ್ರಿ ವತಿಯಿಂದ ಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ (ರಿ.) ಕದ್ರಿ ವತಿಯಿಂದ ಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

ಮಂಗಳೂರು : ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯದ ಪರಿಸರದಲ್ಲಿ ಸುದೀರ್ಘ 56 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ (ರಿ.) ಕದ್ರಿ, ಮಂಗಳೂರು ಇದರ ಆಶ್ರಯದಲ್ಲಿ ಈ ವರ್ಷದ 57ನೇ ವರ್ಷದ 'ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ'ವು ಸೆಪ್ಟೆಂಬರ್ 4 ಮತ್ತು 5, 2026 ರಂದು ವಿಜೃಂಭಣೆಯಿಂದ ಜರುಗಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸುದಾಕರ್ ಪೇಜಾವರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಸೆಪ್ಟೆಂಬರ್ 4, 2026ರ ಶುಕ್ರವಾರದಂದು ಸಂಜೆ 5:00 ಗಂಟೆಗೆ ಕದ್ರಿ ಶ್ರೀ ಜಯ ಮಾರುತಿ ಭಜನಾ ಮಂದಿರದಿಂದ ಶ್ರೀ ಕೃಷ್ಣನ ಶ್ರೀಗಂಧದ ರಜತ ಕವಚದ ಪ್ರತಿಮೆ ಹಾಗೂ ಮಂಟಪದ ವೈಭವದ ಶೋಭಾಸ್ಟೋತ್ಸವ ಜರುಗಲಿದೆ. ಭಜನಾ ತಂಡಗಳೊಂದಿಗೆ ಸಾಗುವ ಈ ಮೆರವಣಿಗೆಯು ಕದ್ರಿ ಕಂಬಳ ರಸ್ತೆ ಮೂಲಕ ಶ್ರೀ ಗೋಪಾಲಕೃಷ್ಣ ಮಠಕ್ಕೆ ಆಗಮಿಸಲಿದ್ದು, ರಾತ್ರಿ 10:00 ಗಂಟೆಗೆ ಮಹಾಪೂಜೆ ನಡೆಯಲಿದೆ.

ಸೆಪ್ಟೆಂಬರ್ 5, 2026ರ ಶನಿವಾರದಂದು ಬೆಳಿಗ್ಗೆ 11:00 ರಿಂದ ಸಂಜೆ 4:00 ರವರೆಗೆ ನಾರಾಯಣ ಬಾಲ ಕೃಷ್ಣ ವೃಂದ (ರಿ.) ಕೊಡಿಯಾಲ್‌ಬೈಲ್ ಇವರಿಂದ ರವಿ ರತ್ನ ಆಶಯದ ಶೈಕ್ಷಣಿಕ, ವೈದ್ಯಕೀಯ ನೆರವು ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 4:00 ಗಂಟೆಗೆ ಧಾರ್ಮಿಕ ಸಭೆ ಜರುಗಲಿದ್ದು, ಕದ್ರಿ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮ ನೆರವೇರಲಿದೆ. ಸಂಜೆ 6:00 ರಿಂದ 8:00 ರವರೆಗೆ ಮಂಗಳೂರಿನ 'ರಿಥಮಿಕ್ ಈವೆಂಟ್ಸ್' ತಂಡದಿಂದ 'ಭಕ್ತಿಭಾವ ಸಂಗಮ' ಕಾರ್ಯಕ್ರಮ ನೆರವೇರಲಿದೆ. ಅದೇ ಸಮಯದಲ್ಲಿ ಶ್ರೀ ಗೋಪಾಲಕೃಷ್ಣ ಮಠದಿಂದ ಅಲಂಕೃತ ಮಂಟಪದಲ್ಲಿ ಶ್ರೀ ಕೃಷ್ಣನ ಪ್ರತಿಮೆಯ ಶೋಭಾಯಾತ್ರೆ ಆರಂಭಗೊಂಡು ಕದ್ರಿ ಕಂಬಳ ರಸ್ತೆ, ಶಿವ ಆಸ್ಪತ್ರೆ ರಸ್ತೆಯಾಗಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ತಲುಪಲಿದೆ.

ರಾತ್ರಿ 8:00 ಗಂಟೆಯಿಂದ ಕದ್ರಿ ಹವ್ಯಾಸಿ ಬಳಗದಿಂದ 'ಕೃಷ್ಣಾನುಗ್ರಹ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದ್ದು, ರಾತ್ರಿ 12:00 ಗಂಟೆಗೆ ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಲಿದೆ. 1970 ರಲ್ಲಿ ಸ್ಥಾಪನೆಗೊಂಡು ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಈ ಸಮಿತಿಯು 2026ನೇ ಸಾಲಿನಲ್ಲಿ 1980 ರಲ್ಲಿ ನವೀಕರಣಗೊಂಡಿದ್ದ ಕದ್ರಿ ರುದ್ರಭೂಮಿಯನ್ನು ದಾನಿಗಳ ನೆರವಿನಿಂದ ಮರು ನವೀಕರಣಗೊಳಿಸಲು ಯೋಜನೆ ರೂಪಿಸಿದೆ. ಇದರೊಂದಿಗೆ ಮುದ್ದು ಕೃಷ್ಣ ಸ್ಪರ್ಧೆಗಳು, ವೈದ್ಯಕೀಯ ಮತ್ತು ರಕ್ತದಾನ ಶಿಬಿರಗಳು, ಉಚಿತ ಕಣ್ಣಿನ ತಪಾಸಣೆ, ಜಾನಪದ ಕಲೆಗಳ ಪ್ರೋತ್ಸಾಹ, ಸೀನಿಯರ್ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಕಿರಣ್ ಜೋಗಿ, ಮೋಹನ್ ಕೊಪ್ಪಳ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ