image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ 67ನೇ ಆವೃತ್ತಿಯ ರೋಟೋಕ್ವಿಜ್ 2026

ಮಂಗಳೂರಿನಲ್ಲಿ 67ನೇ ಆವೃತ್ತಿಯ ರೋಟೋಕ್ವಿಜ್ 2026

ಮಂಗಳೂರು : ಮಂಗಳೂರು ಮತ್ತು ಬೆಂಗಳೂರು ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ 67ನೇ ಆವೃತ್ತಿಯ ರಾಜ್ಯ ಮಟ್ಟದ ಅಂತರ ಕಾಲೇಜು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಪರ್ಧೆ 'ರೋಟೋಕ್ವಿಜ್ 2026' ಅನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಮಂಗಳೂರಿನ ಅಧ್ಯಕ್ಷ ರೋಟೇರಿಯನ್ ಡೈಡನ್ ಡಿ’ಸಿಲ್ವಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ರೋಟರಿ ಕ್ಲಬ್ ಆಫ್ ಬೆಂಗಳೂರು ಕಳೆದ 67 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಈ ಐತಿಹಾಸಿಕ ಸ್ಪರ್ಧೆಯ ಮಂಗಳೂರು ಹಂತದ ಪ್ರಿಲಿಮಿನರಿ ಪರೀಕ್ಷೆ ಹಾಗೂ ಫೈನಲ್ ರೌಂಡ್ 2026ರ ಸೆಪ್ಟೆಂಬರ್ 20 ರವಿವಾರದಂದು ಮಂಗಳೂರಿನ ಎಸ್‌ಡಿಎಮ್ ಪಿಜಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 8:30ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, 9:30ಕ್ಕೆ ಸ್ವಾಗತ ಭಾಷಣ ಹಾಗೂ ಕ್ವಿಜ್ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬೆಳಿಗ್ಗೆ 10:00 ರಿಂದ 10:30 ರವರೆಗೆ ಲಿಖಿತ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, 11:00 ಗಂಟೆಗೆ ಅದರ ಫಲಿತಾಂಶ ಪ್ರಕಟವಾಗಲಿದೆ. ನಂತರ ಆಯ್ಕೆಯಾದ ನಾಲ್ಕು ಅತ್ಯುತ್ತಮ ತಂಡಗಳಿಗೆ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಆಡಿಯೋ, ವಿಡಿಯೋ, ಬಜರ್ ಮತ್ತು ರ್‍ಯಾಪಿಡ್ ಫೈರ್ ಸುತ್ತುಗಳನ್ನೊಳಗೊಂಡ ಅಂತಿಮ ಸ್ಪರ್ಧೆ ನಡೆದು, ಮಧ್ಯಾಹ್ನ 12:30 ರಿಂದ 1:00 ಗಂಟೆಯ ಅವಧಿಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನೆರವೇರಲಿದೆ.

ಮಂಗಳೂರು ಹಂತದ ಸ್ಪರ್ಧೆಗೆ 'ಐಡಿಯಲ್ ಐಸ್ ಕ್ರೀಮ್ಸ್, ಮಂಗಳೂರು' ಪ್ರಾಯೋಜಕತ್ವ ವಹಿಸಿದ್ದು, ಪ್ರಥಮ (₹15,000), ದ್ವಿತೀಯ (₹10,000), ತೃತೀಯ (₹6,000) ಹಾಗೂ ಚತುರ್ಥ (₹4,000) ನಗದು ಬಹುಮಾನಗಳನ್ನು ನೀಡಲಾಗುತ್ತದೆ. ಮಂಗಳೂರಿನಲ್ಲಿ ವಿಜೇತರಾಗುವ ಟಾಪ್ 2 ತಂಡಗಳು ಸೆಪ್ಟೆಂಬರ್ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ '67ನೇ ರಾಮನಾರಾಯಣ್ ಚೆಲ್ಲಾರಾಮ್ ವಾರ್ಷಿಕ ರೋಟೋಕ್ವಿಜ್-2026' ರ ಫೈನಲ್ ಹಂತದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ.

ಬೆಂಗಳೂರು ಫೈನಲ್ ಹಂತಕ್ಕೆ 'ಚೆಲ್ಲಾರಾಮ್ಸ್ ಜ್ಯುವೆಲರ್ಸ್' ಪ್ರಾಯೋಜಕತ್ವ ನೀಡಿದ್ದು, ರೋಲಿಂಗ್ ಶೀಲ್ಡ್, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳ ಜೊತೆಗೆ ಕ್ರಮವಾಗಿ ₹30,000, ₹20,000, ₹15,000, ₹10,000 ಮತ್ತು ₹5,000 ನಗದು ಬಹುಮಾನಗಳನ್ನು ನೀಡಲಾಗುತ್ತದೆ. 2024 ಮತ್ತು 2025ರ ಸತತ ಎರಡು ವರ್ಷಗಳಲ್ಲಿ ಮಂಗಳೂರಿನ CFAL ಕಾಲೇಜು ತಂಡವು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಫೈನಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿತ್ತು ಎಂದು ತಿಳಿಸಿದರು. ಹೆಚ್ಚಿನ ವಿವರಗಳಿಗಾಗಿ ಹಾಗೂ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಮೂಲಕ ನೋಂದಾಯಿಸಲು ರೋಟರಿ ಕ್ಲಬ್ ಮಂಗಳೂರಿನ ಸಂಚಾಲಕ ಡಾ. ಸಿದ್ಧಾರ್ಥ್ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಂಜೀವ ಪೂಜಾರಿ ಮತ್ತು ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ