ಮಂಗಳೂರು : ಮಂಗಳೂರಿನ ಕುಳಾಯಿಯಲ್ಲಿರುವ ನೂತನ ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನದಲ್ಲಿ ಸೆಪ್ಟೆಂಬರ್ 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಅತ್ಯಂತ ಭವ್ಯವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಇಸ್ಕಾನ್ ಕುಲಾಯಿಯ ಶ್ರೀಹಾಸ ದಾಸ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಭಕ್ತಿಪೂರ್ಣ ಕಾರ್ಯಕ್ರಮಗಳು, ಸಾಂಸ್ಕೃತಿಕ ವೈವಿಧ್ಯಗಳು, ವಿಶೇಷ ವಸ್ತುಪ್ರದರ್ಶನಗಳು ಹಾಗೂ ಶೈಕ್ಷಣಿಕ ಉಪಕ್ರಮಗಳು ಈ ಬಾರಿಯ ಮಹೋತ್ಸವದ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.
ಇಸ್ಕಾನ್ ಕುಲಾಯಿಯ ಪ್ರಮುಖರಾದ ನಾಮ ನಿಷ್ಠ ದಾಸ ಮಾತನಾಡಿ ಈ ವರ್ಷದ ಜನ್ಮಾಷ್ಟಮಿ ಮಹೋತ್ಸವದಲ್ಲಿ ಭಕ್ತರಿಗಾಗಿ ಎರಡು ವಿಶೇಷ ವಸ್ತುಪ್ರದರ್ಶನಗಳನ್ನು ಉದ್ಘಾಟಿಸಲಾಗುತ್ತಿದೆ. ಮೊದಲ ವಸ್ತುಪ್ರದರ್ಶನವು ಇಸ್ಕಾನ್ ಸಂಸ್ಥಾಪಕಾಚಾರ್ಯರಾದ ಶ್ರೀಲ ಪ್ರಭುಪಾದರ ಜೀವನಾಧಾರಿತ ಪರಿಚಯ ಹಾಗೂ ಅವರು ಶ್ರೀಕೃಷ್ಣ ಮತ್ತು ಭಗವದ್ಗೀತೆಯ ಬೋಧನೆಗಳನ್ನು ಜಗತ್ತಿನಾದ್ಯಂತ ಪಸರಿಸಿದ ಅಸಾಧಾರಣ ಪ್ರಯಾಣವನ್ನು ಅನಾವರಣಗೊಳಿಸುತ್ತದೆ. ಎರಡನೇ ವಸ್ತುಪ್ರದರ್ಶನವು ಭಗವದ್ಗೀತೆಯ ಮೂಲಭೂತ ತತ್ವಶಾಸ್ತ್ರವನ್ನು ಸರಳ ಹಾಗೂ ಆಕರ್ಷಕ ದೃಶ್ಯ ಮಾಧ್ಯಮಗಳ ಮೂಲಕ ಪರಿಚಯಿಸಲಿದ್ದು, ಯಾವುದೇ ಪೂರ್ವಾಪರ ಜ್ಞಾನವಿಲ್ಲದ ವ್ಯಕ್ತಿಯೂ ಆಧ್ಯಾತ್ಮಿಕ ವಿಚಾರಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾಗಲಿದೆ. ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನೂತನ ಕಾರಂಜಿ (ಫೌಂಟನ್) ಹಾಗೂ ವಿಸ್ತರಿತ ಗೋಶಾಲೆಯ ಕಾಮಗಾರಿಯನ್ನು ಉದ್ಘಾಟಿಸಲಾಗುವುದು. ಇದರೊಂದಿಗೆ, ಆಸಕ್ತರಿಗೆ ಭಗವದ್ಗೀತೆಯ ಆಳವಾದ ಅಧ್ಯಯನ ಮತ್ತು ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಐದು ಅಂತಸ್ತಿನ ಭಗವದ್ಗೀತಾ ಕಾಲೇಜಿನ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಸರ್ವನಾಥ್ ಮಾತನಾಡಿ ಈಗಾಗಲೇ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಅಂತಸ್ತಿನ ಕೆಲಸಗಳು ನಡೆಯುತ್ತಿವೆ. ಮುಂದಿನ ವರ್ಷದ ಜನ್ಮಾಷ್ಟಮಿಯ ವೇಳೆಗೆ ಸಂಪೂರ್ಣ ಕಟ್ಟಡ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದ್ದು, ಈ ಕೇಂದ್ರದಲ್ಲಿ ತರಗತಿ ಕೊಠಡಿಗಳು, ಸೆಮಿನಾರ್ ಹಾಲ್‌ಗಳು ಹಾಗೂ ವಿಶಾಲವಾದ ಸಭಾಂಗಣ ಇರಲಿದೆ. ಮೂರು ದಿನಗಳ ಮಹೋತ್ಸವದಲ್ಲಿ ಭಜನೆ, ಕೀರ್ತನೆ, ಅಭಿಷೇಕ, ಮಹಾಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಂಪ್ರದಾಯಿಕ ಕಲಾ ಪ್ರದರ್ಶನಗಳು ನಡೆಯಲಿವೆ. ದರ್ಶನದ ಸಮಯಕ್ಕೆ ಸಂಬಂಧಿಸಿದಂತೆ, ಸೆಪ್ಟೆಂಬರ್ 4 ಶುಕ್ರವಾರದಂದು ದೇವಸ್ಥಾನವು ಸಾರ್ವಜನಿಕರ ದರ್ಶನಕ್ಕಾಗಿ ಮಧ್ಯರಾತ್ರಿಯವರೆಗೆ ತೆರೆದಿರುತ್ತದೆ. ಸೆಪ್ಟೆಂಬರ್ 5 ಮತ್ತು 6 ರಂದು ರಾತ್ರಿ 10:00 ಗಂಟೆಯವರೆಗೆ ಭಕ್ತಾದಿಗಳಿಗೆ ಶ್ರೀ ಶ್ರೀ ರಾಧಾ ಗೋವಿಂದರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಭಕ್ತಾದಿಗಳು, ಕುಟುಂಬಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದು, ಉಚಿತ ಪ್ರಸಾದ ಸ್ವೀಕರಿಸಬೇಕಾಗಿ ಕೋರಿದರು.