ಮೂಡಬಿದಿರೆ : ಹಾವೇರಿ ಜಿಲ್ಲೆಯ ಹಟ್ಟಿಮತ್ತೂರು ಗ್ರಾಮದ ರೈತನ ಮಗಳು ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆಯಾದ ‘ವೀಸಾ’ದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮಾಹಿತಿ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಸೃಷ್ಟಿ ಅವರಿಗೆ ವಾರ್ಷಿಕ ₹46.33 ಲಕ್ಷದ ಒಟ್ಟು ವೇತನ ಹಾಗೂ ಇತರ ಸೌಲಭ್ಯಗಳ ಉದ್ಯೋಗ ಕೊಡುಗೆ ದೊರೆತಿದೆ.
ತಮ್ಮ ಆರನೇ ಸೆಮಿಸ್ಟರ್‌ನಲ್ಲಿ ಆಳ್ವಾಸ್ ಸಂಸ್ಥೆಯ ನೆರವಿನಿಂದ ವೀಸಾ ಕಂಪನಿಯಲ್ಲಿ 10 ವಾರಗಳ ಕಾಲ ತಿಂಗಳಿಗೆ ₹90,000 ಸ್ಟೈಪೆಂಡ್‌ನೊಂದಿಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದ ಸೃಷ್ಟಿ, ತಮ್ಮ ತಾಂತ್ರಿಕ ಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದರು. ಇವರ ಶ್ರೇಷ್ಠ ಸಾಧನೆಯನ್ನು ಮೆಚ್ಚಿದ ಸಂಸ್ಥೆಯು ಇದೀಗ ಪೂರ್ಣಾವಧಿ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಗೆ ಆಯ್ಕೆ ಮಾಡಿದೆ. ಈ ಉದ್ಯೋಗ ಆಫರ್‌ನೊಂದಿಗೆ ಕುಟುಂಬಕ್ಕೆ ₹7.50 ಲಕ್ಷದ ವೈದ್ಯಕೀಯ ವಿಮೆ, ₹25,000 ಹೊರರೋಗಿ ಚಿಕಿತ್ಸಾ ವೆಚ್ಚ, ಗರಿಷ್ಠ ₹3 ಲಕ್ಷದವರೆಗೆ ಶಿಕ್ಷಣ ನೆರವು, ಕಚೇರಿ ಸಾರಿಗೆ ಹಾಗೂ ಜಿಮ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿವೆ.
ತಮ್ಮ ಈ ಯಶಸ್ಸಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೀಡಿದ ಪ್ರಾಯೋಗಿಕ ಅನುಭವ ಹಾಗೂ ಉದ್ಯಮ ಸಂಪರ್ಕವೇ ಮುಖ್ಯ ಕಾರಣ ಎಂದು ಸೃಷ್ಟಿ ತಿಳಿಸಿದ್ದಾರೆ. ಗ್ರಾಮೀಣ ಭಾಗದ ರೈತ ಕುಟುಂಬದಿಂದ ಬಂದ ಪ್ರತಿಭೆಯೊಂದು ತನ್ನ ಪರಿಶ್ರಮದಿಂದ ಜಾಗತಿಕ ಮಟ್ಟದ ಸಂಸ್ಥೆಯಲ್ಲಿ ಈ ಹಂತ ತಲುಪಿರುವುದು ಹೆಮ್ಮೆಯ ಸಂಗತಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ ಆಳ್ವ ಹಾಗೂ ಕಾಲೇಜಿನ ಅಧ್ಯಾಪಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.