ಮೂಡುಬಿದಿರೆ: ಹೊಸತನದ ಯೋಚನೆ ಹಾಗೂ ಧೈರ್ಯದ ನಿರ್ಧಾರವೇ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ಸಾಹವನ್ನು ಸೃಜನಶೀಲ ಚಟುವಟಿಕೆಗಳ ಮೂಲಕ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ‘ಇನಾಮು’ ವಿದ್ಯಾರ್ಥಿ ವೇದಿಕೆಯ 2026-27ರ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳೇ ರೂಪಿಸಿ ನಡೆಸುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ‘ಇನಾಮು’ ಒಂದಾಗಿದ್ದು, ಹೊಸ ಆಲೋಚನೆಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು. ಸಿಗುತ್ತಿರುವ ಸೌಲಭ್ಯಗಳು ಹಾಗೂ ಪೋಷಕರ ತ್ಯಾಗವನ್ನು ಅರ್ಥಮಾಡಿಕೊಂಡು ಜೀವನದ ಗುರಿಯತ್ತ ಗಮನ ಹರಿಸಬೇಕು. ಸಾಂಪ್ರದಾಯಿಕ ಚಿಂತನೆಯಾಚೆಗೆ ಯೋಚಿಸಿ ಸಮಾಜದ ಸಮಸ್ಯೆಗಳಿಗೆ ಹೊಸ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಯಶಸ್ವಿಯಾಗಲು ಅಸಾಧಾರಣ ಪ್ರತಿಭೆಗಿಂತ ಸವಾಲುಗಳನ್ನು ಸ್ವೀಕರಿಸುವ ಧೈರ್ಯ ಮತ್ತು ಕಠಿಣ ಪರಿಶ್ರಮವೇ ಪ್ರಮುಖ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ (AI) ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಓದುವ ಹಾಗೂ ಬರೆಯುವ ಹವ್ಯಾಸವನ್ನು ಕಾಪಾಡಿಕೊಳ್ಳಬೇಕು. ಡಿಜಿಟಲ್ ವೇದಿಕೆಗಳ ಮೇಲಿನ ಅತಿಯಾದ ಅವಲಂಬನೆ ಮಾನವನ ಚಿಂತನಾ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದು ಎಂದು ಎಚ್ಚರಿಸಿದ ಅವರು, ಸ್ಪರ್ಧಾತ್ಮಕ ಚಟುವಟಿಕೆಗಳು ಭವಿಷ್ಯದ ನಾಯಕತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪ್ರವೇಶ ವಿಭಾಗದ ಮುಖ್ಯಸ್ಥ ಪದ್ಮರಾಜ್ ರೈ, ಇನಾಮು ವೇದಿಕೆಯ ಮುಖ್ಯ ಸಂಯೋಜಕ ಡಾ. ಯೋಗೀಶ್ ಕೈರೋಡಿ, ಸಂಯೋಜಕರಾದ ಮನು ಡಿ.ಎಲ್., ಚೈತ್ರ ರಾವ್ ಹಾಗೂ ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು. ಸಮೀಕ್ಷಾ ಸ್ವಾಗತಿಸಿ, ಅನ್ಫಲ್ ವಂದಿಸಿದರು. ಭೂಮಿಕಾ, ಸಂಕೇತ ಹಾಗೂ ಅನೀಷಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.