ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ಬೃಹತ್ 'ಪುತ್ತೂರು ಚಲೋ' ಕಾರ್ಯಕ್ರಮ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿದ ಕಾರ್ಯಕರ್ತರು, ಬಳಿಕ ಬಹಿರಂಗ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ, ರಾಜ್ಯ ಸರ್ಕಾರ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಮಾತನಾಡಿದ್ದಕ್ಕಾಗಿ ಈ ಹಿಂದೆ ನ್ಯಾಯಾಲಯದಲ್ಲಿ ದಂಡ ತೆತ್ತಿದ್ದರೂ, ಪದೇ ಪದೇ ಆರ್‌ಎಸ್‌ಎಸ್ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ಆತನ ವಿರುದ್ಧ ಈಗಾಗಲೇ 9 ಕ್ರಿಮಿನಲ್ ಪ್ರಕರಣಗಳಿದ್ದು, ತಾಕತ್ತಿದ್ದರೆ ಮೊದಲು ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಆರೋಪಿಸಿದರು.
ಎರಡು ಪ್ರಕರಣಗಳಿದ್ದವರ ಮೇಲೆಯೇ ರೌಡಿಶೀಟರ್ ತೆರೆಯುವ ಪೊಲೀಸರು, ಪ್ರಿಯಾಂಕ್ ಖರ್ಗೆಯನ್ನು ಪುಡಿ ರೌಡಿಶೀಟರ್‌ಗಳ ಜೊತೆ ನಿಲ್ಲಿಸಿ ಪೆರೇಡ್ ಮಾಡಿಸಲಿ ಎಂದು ಶೆಟ್ಟಿ ಕಿಡಿಕಾರಿದರು. ರಾಜ್ಯ ಸರ್ಕಾರ ಪೊಲೀಸರನ್ನು ನಮ್ಮ ವಿರುದ್ಧ ಛೂ ಬಿಟ್ಟಿದ್ದು, ಪೊಲೀಸ್ ಇಲಾಖೆ ಹಿಂದೂ ಸಂಘಟನೆಗಳ ವಿರುದ್ಧ ನಿಂತಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಸಮಾಜದ ಪರವಾಗಿ ಧ್ವನಿ ಎತ್ತುವವರ ವಿರುದ್ಧ ತಕ್ಷಣವೇ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ಆದರೆ, ಪೊಲೀಸ್ ಜೀಪಿಗೆ ನುಗ್ಗಿ ಹಲ್ಲೆ ನಡೆಸಿ ಇಲಾಖೆಗೆ ಅವಮಾನ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂ ಸಂಘಟನೆಗಳು ಇಂತಹ ಸಾವಿರಾರು ಪ್ರಕರಣಗಳನ್ನು ಹಾಗೂ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯನ್ನೇ ಧೈರ್ಯವಾಗಿ ಎದುರಿಸಿದ ಇತಿಹಾಸ ಹೊಂದಿವೆ. ಇಂದು ನ್ಯಾಯಾಲಯಗಳು ಹಿಂದೂ ಕಾರ್ಯಕರ್ತರ ಪರವಾಗಿ ನ್ಯಾಯ ಒದಗಿಸುತ್ತಿವೆ ಎಂದು ಹೇಳಿದರು.